ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಗೌರಿ – ಗಣೇಶ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗೌರಿ ಹಬ್ಬದ ಅಂಗವಾಗಿ ಮುಂಜಾನೆಯೇ ಮಡಿಯುಟ್ಟ ಮಹಿಳೆಯರು, ಬಾವಿ, ನದಿ, ಕೊಳವೆ ಬಾವಿಗಳ ಬಳಿಗೆ ಸಾಮೂಹಿಕವಾಗಿ ತೆರಳಿ, ಗಂಗೆ ಪೂಜೆ ನಡೆಸಿದರು. ಹೊಸ ನೀರಿನಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಕಂಕಣ ಕಟ್ಟಿಕೊಂಡು, ಮಹಿಳೆಯರಿಗೆ ಬಾಗಿನ ಕೊಟ್ಟು, ಗೌರಿಯನ್ನು ಮನೆ ತುಂಬಿಸಿಕೊಂಡರು. ಮನೆಗೆ ಬಂದ ಗೌರಿಗೆ ಮನೆ ಮಂದಿ ಆರತಿ ಬೆಳಗಿ ಒಳಗೆ ಕರೆದುಕೊಂಡು ಪೂಜೆ ಸಲ್ಲಿಸಿದರು. ಗೌರಿ ಹಬ್ಬವು ಶುಕ್ರವಾರ ಬಂದಿರುವುದರಿಂದ ಪೂಜಾ ಕೈಂಕರ್ಯಗಳು ಹೆಚ್ಚಾಗಿದ್ದವು.
ಚಿಗಲಿ, ಟಮಟ, ಎಳ್ಳುಂಡೆ, ಗರ್ಜಿಕಾಯಿ ಸೇರಿದಂತೆ ವಿವಿಧ ಸಿಹಿ ಭಕ್ಷ್ಯಗಳನ್ನು ತಯಾರಿಸಿ ಗೌರಿ ದೇವಿಗೆ ನೈವೇದ್ಯ ನೀಡಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು. ಕಲವು ಮನೆಗಳಲ್ಲಿ ಸಂಜೆ ವೇಳೆಗೆ ಗೌರಿಯನ್ನು ವಿಸರ್ಜಿಸಿದರೆ, ಮತ್ತೆ ಕೆಲವು ಮನೆಗಳಲ್ಲಿ ಗಣಪತಿಯೊಂದಿಗೆ ವಿಸರ್ಜನೆ ಮಾಡುವ ಪದ್ಧತಿಯಿರುವುದರಿಂದ ಮನೆಯಲ್ಲೇ ಉಳಿಸಿಕೊಳ್ಳಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.