ಮಲ್ಲಂದೂರು(ಎನ್.ಆರ್.ಪುರ): ಹದಿನಾರು ವರ್ಷಗಳಿಂದ ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂಜೀವ ದೇವಾಡಿಗ ಅವರು, 25 ಹೆಕ್ಟೇರ್‌ಗಿಂತಲೂ ಹೆಚ್ಚಿನ ನೆಡತೋಪು ಬೆಳೆಸಿದ್ದಾರೆ ಎಂದು ಮಲ್ಲಂದೂರು ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಂ.ಎನ್.ಶಂಕರನಾರಾಯಣ ಹೇಳಿದರು.
ವರ್ಗಾವಣೆಗೊಂಡ ಸಂಜೀವ್ ದೇವಾಡಿಗ ಹಾಗೂ ವನ ಪಾಲಕ ರವಿಕುಮಾರ್ ಅವರಿಗೆ ಭಾನುವಾರ ಮಲ್ಲಂದೂರಿನ ಹೊನ್ನಮ್ಮೇಶ್ವರಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಜೀವ್ ದೇವಾಡಿಗ ಅವರು ಬೆಂಕಿಯಿಂದ ಅರಣ್ಯ ರಕ್ಷಿಸಲು ತೀವ್ರ ಎಚ್ಚರಿಕೆ ವಹಿಸಿದ್ದರು. ಅವರ ಸಮರ್ಥ ಕಾರ್ಯವೈಖರಿಯಿಂದ ಗ್ರಾಮಸ್ಥರ ಹಾಗೂ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿಂದ ವರ್ಗಾವಣೆಯಾಗುತ್ತಿರುವ ವನಪಾಲಕ ರವಿಕುಮಾರ್ ಕೂಡ ಇಲ್ಲಿ 6 ವರ್ಷ ಕೆಲಸ ಮಾಡಿದ್ದು, ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.
‘ಲಭಿಸಿದ ಅವಕಾಶದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ’ ಎಂದು ಸಂಜೀವ್ ದೇವಾಡಿಗ ಹೇಳಿದರು.
ಗ್ರಾಮಸ್ಥರಾದ ಮಧುಕರ್ ಅನಿಸಿಕೆ ವ್ಯಕ್ತಪಡಿಸಿದರು. ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಗ್ರಾಮದ ಹಿರಿಯರಾದ ಎಂ.ಎಸ್.ನಾಗೇಂದ್ರ, ಎಂ.ಎನ್.ಲಕ್ಷ್ಮೀನಾರಾಯಣ, ಎಂ.ಎನ್.ಸುರೇಶ್, ನೂತನ ಉಪ ವಲಯ ಅರಣ್ಯಾಧಿಕಾರಿ ಪರಮೇಶ್ವರ್, ನೂತನ ವನಪಾಲಕ ತಬರೇಜ್, ಗ್ರಾಮಸ್ಥರಾದ ಕೆ.ಕೆ. ನರಸಿಂಹಮೂರ್ತಿ, ಕೆ.ಕೆ.ರಮೇಶ್, ಅರೆಕುಡಿಗೆ ರವಿ, ಕೇಶವ, ಎಂ.ಕೆ.ಮೋಹನ, ದಿನೇಶ್ ಕ್ಯಾಜಿಗೆ, ಕೆ.ಕೆ.ರಮೇಶ್, ಹಂಪಿನಮನೆ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.