ADVERTISEMENT

ಮಲೆನಾಡಿನ ಮಳೆಗಾಲದ ಅತಿಥಿ ಅಣಬೆ

ಜೋಸೆಫ್ ಎಂ.ಆಲ್ದೂರು
Published 5 ಆಗಸ್ಟ್ 2024, 5:51 IST
Last Updated 5 ಆಗಸ್ಟ್ 2024, 5:51 IST
ಬೇರು ಅಣಬೆ
ಬೇರು ಅಣಬೆ   

ಆಲ್ದೂರು: ನಿಸರ್ಗದ ಮಡಿಲಿನಲ್ಲಿ ಹುಟ್ಟುವ ಅಣಬೆಗಳು ಮಲೆನಾಡಿನ ಜನರಿಗೆ ಅಚ್ಚುಮೆಚ್ಚು. ಸುರಿವ ಮಳೆಯ ನಡುವೆ ಅಲ್ಲಲ್ಲಿ ಎದ್ದಿರುವ ಅಣಬೆಗಳು ಎದ್ದಿದ್ದು, ಮಳೆಗಾಲದ ಅತಿಥಿಯಾಗಿ ಕಾಣಿಸುತ್ತಿವೆ.

ರಾಸಾಯನಿಕ ಬಳಸಿ ಬೆಳೆಯುವ ಕೃತಕ ಅಣಬೆಗೂ ನೈಸರ್ಗಿಕವಾಗಿ ಬೆಳೆಯುವ ಅಣಬೆಗೂ ಸಾಕಷ್ಟು ವ್ಯತ್ಯಾಸವಿದೆ. ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ಅದರಲ್ಲೂ ಜುಲೈ ತಿಂಗಳಿನಲ್ಲಿ ಸುರಿಯುವ ಗುಡುಗು ಮಿಂಚಿನ ಮಳೆಯಿಂದಾಗಿ ತೇವಾಂಶ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣು ಸಡಿಲಗೊಳ್ಳುತ್ತದೆ. ಇದು ಅಣಬೆಗಳು ಅಲ್ಲಲ್ಲಿ ಹುಟ್ಟಲು ಅನುಕೂಲ ವಾತಾವರಣ ಸೃಷ್ಟಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಹುತ್ತಗಳ ಮಣ್ಣು, ಹುಲ್ಲುಗಾವಲು, ಗದ್ದೆಯ ಪ್ರದೇಶಗಳು, ಕಾಫಿ ತೋಟಗಳಲ್ಲಿ ಅಣಬೆಗಳು ಕಾಣಿಸಿಕೊಳ್ಳುತ್ತವೆ. ಈಗ ಮಲೆನಾಡಿನಲ್ಲಿ ಎಲ್ಲೆಡೆ ಈ ಅಣಬೆಗಳು ಕಾಣಿಸಿಕೊಳ್ಳುತ್ತಿದ್ದು, ಅಣಬೆ ಪ್ರಿಯರಿಗೆ ಹಬ್ಬವಾಗಿದೆ.

ADVERTISEMENT

ಅಣಬೆಗಳಿಗೆ ಸಸ್ಯಗಳ ರೀತಿಯಲ್ಲಿ ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವುದಿಲ್ಲ. ಅವು ಪರಾವಲಂಬಿಗಳಾಗಿದ್ದು, ಮಣ್ಣಿನಲ್ಲಿ ಹುದುಗಿ ಕೊಳೆಯುತ್ತಿರುವ ಎಲೆಗಳು ಹಾಗೂ ಕೊಳೆತ ವಸ್ತುಗಳಿಂದ ಆಹಾರ ಪೂರೈಸಿಕೊಳ್ಳುತ್ತದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಕೃಷ್ಣಪ್ಪ ಪೂಜಾರಿ.

ಹೆಚ್ಚಾಗಿ ಆಷಾಢ ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಅಣಬೆಗಳು ಹುತ್ತದ ಮಣ್ಣಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಹುತ್ತದ ಅಣಬೆ, ಬೇರು ಅಣಬೆ ಅಥವಾ ಎಕ್ಕಲು ಅಣಬೆ ಎಂದೂ ಕರೆಯಲ್ಪಡುತ್ತಾರೆ. ಎಣ್ಣೆ ಮಸಲಿ, ಹುಲ್ಲು ಅಣಬೆ, ಅಕ್ಕಿ ಅಣಬೆ ಅಥವಾ ದರಗಣಬೆ, ಆನೆ ಅಣಬೆ, ಮರದಣಬೆಗಳೂ ಮಲೆನಾಡಿನ ಜನರಿಗೆ ಇಷ್ಟ.

ಎಣ್ಣೆ ಮಸಲಿ ಅಣಬೆ
ದರಗು ಅಣಬೆ

ಪೋಷಕಾಂಶಗಳ ಆಗರ

ಪ್ರಕೃತಿದತ್ತವಾಗಿ ಹುಟ್ಟುವ ಅಣಬೆಗಳಲ್ಲಿ ಎಲ್ಲಾ ರೀತಿಯ ವಿಟಮಿನ್‌ಗಳಿವೆ. ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಸಹಕಾರಿ. ಮಾಂಸಹಾರದಲ್ಲಿ ಸಿಗುವ ಪೋಷಕಾಂಶಗಳು ಈ ಅಣಬೆಗಳಲ್ಲಿ ದೊರೆಯುತ್ತವೆ. ಆದ್ದರಿಂದ ಸಸ್ಯಹಾರಿಗಳಿಗೆ ಮತ್ತು ಗರ್ಭಿಣಿಯರಿಗೆ ಹೆಚ್ಚು ಅನುಕೂಲ. ಅನಿಮಿಯ ಮತ್ತು ರಕ್ತಹೀನತೆ ತಡೆಯಬಹುದು ಎನ್ನುತ್ತಾರೆ ವೈದ್ಯ ಡಾ.ಮಹದೇವಸ್ವಾಮಿ. ಬಾಯಿಹುಣ್ಣು ಚರ್ಮ ಸಂಬಂಧಿತ ಕಾಯಿಲೆಗಳು ಕೀಲು ನೋವು ಊತ ರಕ್ತದ ಸುಗಮ ಸಂಚಾರಕ್ಕೆ ದೇಹದ ಕಲೆ ನಿವಾರಣೆ ನಿದ್ರಾ ಹೀನತೆ ನಿವಾರಣೆಗೂ ಔಷಧಿ ರೂಪದಲ್ಲಿ ಅಣಬೆ ಕೆಲಸ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.