ADVERTISEMENT

ಕೊಟ್ಟಿಗೆಹಾರ | ಹೇಮಾವತಿ ನದಿ ದಡದಲ್ಲಿ ಕೊಳೆತ ಮೀನಿನ ರಾಶಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:36 IST
Last Updated 2 ಜುಲೈ 2024, 14:36 IST
ಹೇಮಾವತಿ ನದಿ ದಡದಲ್ಲಿ ಎಸೆದಿದ್ದ ಕೊಳೆತ ಮೀನಿನ ರಾಶಿಯನ್ನು ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು
ಹೇಮಾವತಿ ನದಿ ದಡದಲ್ಲಿ ಎಸೆದಿದ್ದ ಕೊಳೆತ ಮೀನಿನ ರಾಶಿಯನ್ನು ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು   

ಕೊಟ್ಟಿಗೆಹಾರ: ಬಣಕಲ್ ಸಮೀಪದ ಹೇಮಾವತಿ ನದಿ ದಡದಲ್ಲಿ ಕೊಳೆತ ಮೀನಿನ ರಾಶಿಯನ್ನು ಸುರಿದು ನದಿ ನೀರು ಕಲುಷಿತಗೊಳ್ಳುವಂತೆ ಮಾಡಲಾಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. 

ಮೀನು ಮಾರಾಟಗಾರರು ಮಾರಾಟವಾಗದೆ ಉಳಿದ ಮೀನನ್ನು ಅಥವಾ ಮೀನು ಸಾಗಿಸುವ ಲಾರಿಯವರು ವಾಹನ ಸ್ವಚ್ಛಗೊಳಿಸುವಾಗ ಉಳಿದ, ಹಾಳಾದ ಮೀನುಗಳನ್ನು ಇಲ್ಲಿ ಎಸೆದಿರುವ ಸಾಧ್ಯತೆಗಳಿವೆ. ಈ ಮೀನುಗಳು ಕೊಳೆತು ನದಿ ನೀರು ಸೇರುತ್ತಿದೆ.  ಕೆಲವು ಗ್ರಾಮಗಳ ಜನರು ಹೇಮಾವತಿ ನದಿ ನೀರನ್ನೇ ಕುಡಿಯಲುಬಳಸುತ್ತಾರೆ. ನದಿ ತೀರದಲ್ಲಿ ಮೀನು ಎಸೆದವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಸೋಮವಾರ ಸಂತೆ ದಿನ. ಕೆಲವು ಮೀನು ಸಾಗಿಸುವ ವಾಹನ ಚಾಲಕರು ವಾಹನ ತೊಳೆಯಲು ಹೋಗಿ ಕೊಳೆತ ಮೀನು ನದಿ ದಂಡೆಯಲ್ಲಿ ಬಿಸಾಕಿದ್ದಾರೆ’ ಎಂದು ಸಮಾಜ ಸೇವಕ ಮೊಹಮ್ಮದ್ ಆರೀಫ್ ಹೇಳಿದರು.

ADVERTISEMENT

ಹೇಮಾವತಿ ನದಿ ತೀರದಲ್ಲಿ ಕೊಳೆತ ಮೀನು ಎಸೆದಿರುವ ಬಗ್ಗೆ ದೂರು ಬಂದಿದೆ. ಅದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಮೀನು ಸಾಗಿಸುವ ವಾಹನಗಳ ಚಾಲಕರು ಹಾಗೂ ಮೀನು ವ್ಯಾಪಾರಿಗಳಿಗೆ ನದಿಯ ಬದಿಯಲ್ಲಿ ಕೊಳೆತ ಮೀನು ಎಸೆಯದಂತೆ ಎಚ್ಚರಿಕೆ ನೀಡಲಾಗಿದೆ. ಇದು ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಬಣಕಲ್‌ ಗ್ರಾ.ಪಂ. ಅಧ್ಯಕ್ಷೆ ಅತಿಕಾಭಾನು ಹೇಳಿದರು.

ಬಣಕಲ್ ಹೇಮಾವತಿ ನದಿಯ ತೀರದಲ್ಲಿ ಕೊಳೆತ ಮೀನಿನ ರಾಶಿಯ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.