ADVERTISEMENT

ಕೊಪ್ಪ: ಸ್ಕಾರ್ಫ್‌ಗೆ ವಿರೋಧ, ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:02 IST
Last Updated 4 ಜನವರಿ 2022, 6:02 IST
ಕೊಪ್ಪದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದದ್ದರು.
ಕೊಪ್ಪದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದದ್ದರು.   

ಕೊಪ್ಪ: ‘ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತರಗತಿಗಳಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಸೋಮವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದಿದ್ದರು.

‘ಕಾಲೇಜಿನಲ್ಲಿ ಕೆಲವರು ತರಗತಿ ಸಮಯದಲ್ಲಿ ಸ್ಕಾರ್ಫ್ ಧರಿಸಿ ಕುಳಿತಿರುತ್ತಾರೆ. ಸಮವಸ್ತ್ರದ ಮೂಲ ಉದ್ದೇಶವನ್ನು ಉಲ್ಲಂಘಿಸಿದಂತೆ ಆಗುತ್ತಿದೆ. ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಪ್ರಾಂಶುಪಾಲರು ಕಟ್ಟುನಿಟ್ಟಾಗಿ ಸೂಚಿಸಬೇಕು’ ಎಂದು ಎಬಿವಿಪಿ ನಗರ ಕಾರ್ಯದರ್ಶಿ ವಿನಯ್ ಶಿವಪುರ ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಡಾ.ಎಸ್.ಅನಂತ, ‘ಈ ಹಿಂದೆ ನಡೆದ ಪೋಷಕರ ಸಭೆ ತೀರ್ಮಾನವನ್ನು ಯಾರೂ ಮೀರುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಘಟನೆ ಮರುಕಳಿಸಿದರೆ ಪೋಷಕರನ್ನು ಕರೆಯಿಸಿ, ಸಂಬಂಧಿಸಿದ ವಿದ್ಯಾರ್ಥಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಟಿ.ಡಿ.ರಾಜೇಗೌಡ, ‘ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳೆಲ್ಲರೂ ಭಾರತಾಂಬೆಯ ಮಕ್ಕಳು. ಇಲ್ಲಿ ಭೇದ ಸಲ್ಲದು. ಇಲಾಖೆ, ಸರ್ಕಾರದ ನಿಯಮವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಮರುಕಳಿಸಿದ ಘಟನೆ: ಮೂರು ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ ಸೃಷ್ಟಿಸಿತ್ತು. ಪೋಷಕರ ಸಭೆ ಬಳಿಕ ತಿಳಿಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.