ADVERTISEMENT

ಅಜ್ಜಂಪುರ: ರೋಗಗ್ರಸ್ಥವಾದ ನಂದೀಪುರ ಆರೋಗ್ಯ ವಿಸ್ತರಣಾ ಕೇಂದ್ರ

ಜೆ.ಒ.ಉಮೇಶ್ ಕುಮಾರ್
Published 27 ಮೇ 2024, 5:50 IST
Last Updated 27 ಮೇ 2024, 5:50 IST
ಅಜ್ಜಂಪುರ ತಾಲ್ಲೂಕಿನ ನಂದೀಪುರದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಹರಿಯುತ್ತಿರುವ ನೀರು.
ಅಜ್ಜಂಪುರ ತಾಲ್ಲೂಕಿನ ನಂದೀಪುರದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಹರಿಯುತ್ತಿರುವ ನೀರು.   

ಅಜ್ಜಂಪುರ: ತಾಲ್ಲೂಕಿನ ಗಡೀಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಂದೀಪುರದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಅಶುಚಿತ್ವದ ರೋಗ ತಗುಲಿದೆ. ಸ್ವಂತ ಕಟ್ಟಡವಿಲ್ಲದ ಆರೋಗ್ಯ ವಿಸ್ತರಣಾ ಕೇಂದ್ರ, ಭಜನಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಕಟ್ಟಡ ಸೋರುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಮತ್ತು ಮಲಿನ ನೀರು ಕೇಂದ್ರದೊಳಕ್ಕೆ ಹರಿದು ಸಂಗ್ರಹವಾಗಿದೆ.

ಕೇಂದ್ರದಲ್ಲಿ ಕೊಳಚೆ ಸೃಷ್ಟಿಯಾಗಿ ದುರ್ವಾಸನೆ ಬೀರುತ್ತಿದೆ. ರೋಗಕಾರಕ ಸೊಳ್ಳೆ, ಕ್ರಿಮಿ ಕೀಟ ಹೆಚ್ಚಾಗಿದ್ದು, ಕಾಯಿಲೆ ಗುಣಪಡಿಸಬೇಕಾದ ಕೇಂದ್ರವೇ ರೋಗ ಹರಡುವ ತಾಣವಾಗಿ ಪರಿವರ್ತನೆಯಾಗಿದೆ.

ಕೇಂದ್ರದಲ್ಲಿ ಸಂಗ್ರಹಗೊಂಡ ನೀರಿನಲ್ಲಿಯೇ ನಿಂತು ದಾದಿಯರು ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅನಾರೋಗ್ಯಕರ ವಾತಾವರಣದಲ್ಲಿಯೇ ರೋಗಿಗಳು ಚಿಕಿತ್ಸೆ ಪಡೆಯಬೇಕಾಗಿದೆ.

ADVERTISEMENT

ಆರೋಗ್ಯ ವಿಸ್ತರಣಾ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು. ಆರೋಗ್ಯ ವಿಸ್ತರಣಾ ಕೇಂದ್ರ ನಿರ್ಮಾಣಕ್ಕೆ ಅಗತ್ಯ ನಿವೇಶನ ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟವರು ಅನುದಾನ ಮಂಜೂರು ಮಾಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

‘ಅವ್ಯವಸ್ಥೆ ಸರಿಪಡಿಸಿ’

ಆರೋಗ್ಯ ವಿಸ್ತರಣಾ ಕೇಂದ್ರದ ದುಃಸ್ಥಿತಿಯನ್ನು ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದೇವೆ. ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ್ದೇವೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ, ಆರೋಗ್ಯ ವಿಸ್ತರಣ ಕೇಂದ್ರದ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿ ಗೋವಿಂದರಾಜು ಒತ್ತಾಯಿಸಿದ್ದಾರೆ.‌

‘ಸೌಕರ್ಯ ಕಲ್ಪಿಸಿ’

ಗ್ರಾಮದಲ್ಲಿ 450 ಕುಟುಂಬ, 1,500ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಜ್ವರ, ಶೀತ, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗೂ ತಾಲ್ಲೂಕು ಕೇಂದ್ರಕ್ಕೆ ಹೋಗುವುದು ಕಷ್ಟ. ಇಲ್ಲಿಯೇ ಇರುವ ಆರೋಗ್ಯ ವಿಸ್ತರಣಾ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ವೃದ್ಧ ನಂಜುಂಡಪ್ಪ ಹೇಳಿದರು.

ನಂದೀಪುರದ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿರುವ ದಾದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.