ಅಜ್ಜಂಪುರ: ತಾಲ್ಲೂಕಿನಲ್ಲಿ ಮುಂಗಾರು ಮುನಿದಿದೆ, ಮಳೆ ಮರೆಯಾಗಿದ್ದು, ಬೆಳೆ ಒಣಗುವ ಹಂತ ತಲುಪುತ್ತಿದೆ. ಕೃಷಿಗೆ ಹಾಕಿದ ಬಂಡವಾಳ ಕೈತಪ್ಪುವ ಬೀತಿ ಆವರಿಸಿದ್ದು, ರೈತರು ಕಂಗಾಲಾಗಿದ್ದಾರೆ.
ಆಗಸದಲ್ಲಿ ಮೋಡದ ಸುಳಿವಿಲ್ಲ, ಮಳೆಗಾಲದಲ್ಲೂ ಬಿರು ಬಿಸಿಲು ಆವರಿಸಿದೆ. ರಾತ್ರಿ ವೇಳೆ ಬೀಸುತ್ತಿರುವ ಶೀತ ಗಾಳಿ, ಮಳೆಯ ಅಭಾವವನ್ನು ಸೂಚಿಸುತ್ತಿದೆ.
ತಾಲ್ಲೂಕಿನ ಪ್ರಮುಖ ಮತ್ತು ಪ್ರಧಾನ ಬೆಳೆ ಈರುಳ್ಳಿ. ಪ್ರತಿವರ್ಷ 5,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಈ ಬಾರಿ ಆರಂಭಿಕ ಮಳೆ ಕೊರತೆಯಿಂದ 3,600 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆ ಕಂಡಿದೆ ಎಂಬುದು ತೋಟಗಾರಿಕಾ ಇಲಾಖೆ ಮಾಹಿತಿ.
ಅರೆಮಲೆನಾಡು ಪ್ರದೇಶವಾದ ನಮ್ಮ ತಾಲ್ಲೂಕಿನಲ್ಲಿ ನೀರಾವರಿ ಆಶ್ರಿತ ಬೇಸಾಯ ಇಲ್ಲ. ಮಳೆಯನ್ನೇ ನಂಬಿದ ಕೃಷಿ ಚಾಲ್ತಿಯಲ್ಲಿದೆ. ಮಳೆ, ಕೆಲವೊಮ್ಮೆ ಹೆಚ್ಚಾಗಿ, ಮತ್ತೊಮ್ಮೆ ಕ್ಷೀಣಿಸಿ ಬರುವುದರಿಂದ ಇಲ್ಲಿನ ರೈತರನ್ನು ಸಂಕಟಕ್ಕೆ ತಳ್ಳುತ್ತದೆ. ಈ ಬಾರಿ ಮಳೆ ಕೊರತೆಯಿಂದ ಮುಂಗಾರು ಬೆಳೆಯಲ್ಲಿ ಆದಾಯ ಗಳಿಸಬೇಕೆಂಬ ರೈತರ ಕನಸಿಗೆ ತಣ್ಣೀರೆರಚಿದೆ ಎನ್ನುತ್ತಾರೆ ರೈತ ವೀರಭದ್ರಪ್ಪ.
ಆರಂಭಿಕ ಮಳೆ ಕೊರತೆಯಿಂದ ಎರಡು ಬಾರಿ ಬಿತ್ತನೆ ನಡಸಿದ್ದೇವೆ. ಹೊಲ ಹಸನು, ಬೇಸಾಯ, ಬಿತ್ತನೆ ಬೀಜ, ಕಳೆ ತೆಗೆಸುವಿಕೆ ಹೀಗೆ ಒಂದು ಎಕರೆಗೆ ಸುಮಾರು ₹15ರಿಂದ ₹20 ಸಾವಿರ ಖರ್ಚು ಮಾಡಿದ್ದೇವೆ. ಮಳೆ ಬಾರದಿದ್ದರೆ ಬೆಳೆ ಬೆಳೆಯುವುದಿಲ್ಲ, ಬೆಳೆಗೆ ಹಾಕಿರುವ ಬಂಡವಾಳವೂ ಕೈಸೇರುವ ಬಗ್ಗೆ ಅನುಮಾನ ಮೂಡಿದೆ. ಬೆಳೆಗಾಗಿ ತಂದಿರುವ ಸಾಲ ತೀರಿಸುವುದು ಹೇಗೆ? ಎಂಬ ಚಿಂತೆ ಕಾಡುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತ ನಂಜುಂಡಪ್ಪ.
ಮಳೆ ಅಭಾವ, ರೈತರನ್ನಷ್ಟೇ ಕಾಡುತ್ತಿಲ್ಲ, ಕೂಲಿ ನಂಬಿ ಬದುಕುತ್ತಿರುವ ಕೃಷಿ ಕಾರ್ಮಿಕರಿಗೂ ತೊಂದರೆ ಉಂಟು ಮಾಡಿದೆ. ಮಳೆ ಕೊರತೆಯಿಂದ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಕ್ರಿಮಿ-ಕೀಟ-ಕಳೆ ನಾಶಕ ಸಿಂಪಡಣೆಯಂತಹ ಕೃಷಿ ಕಾರ್ಯ ಸ್ಥಗಿತಗೊಂಡಿದೆ. ದಿನವೊಂದಕ್ಕೆ ₹300ರಿಂದ ₹500 ಕೂಲಿ ಪಡೆಯುತ್ತಿದ್ದ ಕೃಷಿ ಕಾರ್ಮಿಕರು, ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಗಾರು ಬೆಳೆ ಈರುಳ್ಳಿ ನಂಬಿದ್ದ ರೈತರಿಗೆ ಮಳೆ ಕೊರತೆ ಶಾಪವಾಗಿ ಕಾಡುತ್ತಿದೆ. ಸಾಲ ಮಾಡಿ ಬೆಳೆ ಮಾಡಿರುವ ರೈತರ ಕಣ್ಣಲ್ಲಿ ಕಣ್ಣೀರು ತರಿಸಿದೆ.
ಈರುಳ್ಳಿ ಬೆಳೆ ಉತ್ತಮವಾಗಿದ್ದು ಆದರೆ ಮಳೆ ಅವಶ್ಯಕತೆಯಿದೆ. ಈರುಳ್ಳಿ ಸಸಿ ಬೆಳವಣಿಗೆ ಗಡ್ಡೆಕಟ್ಟಲು ಮಳೆಯ ತುರ್ತು ಅಗತ್ಯವಿದೆ. ಮಳೆ ಬಾರದಿದ್ದರೆ ಇಳುವರಿ ಗಣನೀಯವಾಗಿ ಕ್ಷೀಣಿಸಲಿದೆ
-ಅವಿನಾಶ್ ತೋಟಗಾರಿಕೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.