ಅಜ್ಜಂಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ.
ವಿದ್ಯಾರ್ಥಿಗಳು ಪದವಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಪಠ್ಯೇತರ ಚಟುವಟಿಕೆಗಳಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿಬಿಎ, ಬಿಎಸ್‌ಡಬ್ಲ್ಯು ವಿಭಾಗಗಳಿವೆ. ಬಿ.ಎ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ ವಿಷಯಗಳಿದ್ದು, ಉಳಿದ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ನಿಗದಿಪಡಿಸಿದ ಪಠ್ಯ ವಿಷಯಗಳಿವೆ. ವಿದ್ಯಾರ್ಥಿಗಳ ಕೊರತೆ ಕಾರಣ ಬಿಎಸ್ಸಿ ಮತ್ತು ಬಿಸಿಎ ತರಗತಿ ಪ್ರಾರಂಭವಾಗಿಲ್ಲ.
12 ಪೂರ್ಣಕಾಲಿಕ ಹಾಗೂ 15 ಅತಿಥಿ ಉಪನ್ಯಾಸಕರೂ ಸೇರಿದಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾದ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದು, ಸ್ಫೋಕನ್ ಇಂಗ್ಲಿಷ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು 18 ಸಾವಿರಕ್ಕೂ ಅಧಿಕ ಪಠ್ಯ ಆಧಾರಿತ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಸ್ಮಾರ್ಟ್ ಕೊಠಡಿ, ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ ಉತ್ತೇಜಿಸಲು ಎನ್.ಎಸ್.ಎಸ್, ರೇಂಜರ್ಸ್ ಮತ್ತು ರೋವರ್ಸ್, ರೆಡ್-ರಿಬ್ಬನ್ ಕ್ಲಬ್, ಅಡ್ವೆಂಚರ್ ಕ್ಲಬ್ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಸೌಲಭ್ಯ, ಸುರಕ್ಷತೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ನ್ಯಾಕ್‌ನಿಂದ ‘ಬಿ’ ಶ್ರೇಣಿ ಹಾಗೂ ಯುಜಿಸಿಯ 2 (ಎಫ್) ಮತ್ತು 12 (ಬಿ) ಮಾನ್ಯತೆ ಪಡೆದಿದೆ. ಕಾಲೇಜಿನಲ್ಲಿ ಕ್ರೀಡಾಂಗಣ, ಕ್ಯಾಂಟೀನ್ ಸೌಲಭ್ಯಗಳ ಕೊರತೆ ಕಾಡುತ್ತಿದೆ.
ಹತ್ತಾರು ಸೌಲಭ್ಯಗಳ ಹೊರತಾಗಿಯೂ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ದಾಖಲಾತಿ ಹೆಚ್ಚಿಸಲು ಉಪನ್ಯಾಸಕರು, ಪ್ರಾಚಾರ್ಯರು ದಾಖಲಾತಿ ಆಂದೋಲನ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ಸೌಲಭ್ಯದ ಮೂಲಕ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ. ಸಾಮಾಜಿಕ, ಆರ್ಥಿಕ ನಿರೀಕ್ಷೆಗಳಿಗೆ ಅನುಗುಣವಾಗಿ, ವಿದ್ಯಾರ್ಥಿಗಳನ್ನು ಶ್ರೇಷ್ಠ ಮಾನವ ಸಂಪನ್ಮೂಲವಾಗಿ ರೂಪಿಸಲಾಗುತ್ತಿದೆ. ಇದು ಕಾಲೇಜಿನ ಹೆಗ್ಗಳಿಕೆ ಎನ್ನುತ್ತಾರೆ ಪ್ರಾಂಶುಪಾಲ ಕೆ.ರಾಜಣ್ಣ.
ಪಾರಂಪರಿಕ ಬೋಧನೆ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಕಾಲೇಜಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ.-ಎಸ್.ಎಲ್.ಆನಂದ್. ಸಹಾಯಕ ಪ್ರಾಧ್ಯಾಪಕ
ಉತ್ತಮ ಬೋಧನೆ ಉಪನ್ಯಾಸಕರ ಮಾರ್ಗದರ್ಶನ ಗ್ರಂಥಾಲಯ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಲು ಸಹಾಯಕವಾದವು. ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಬದುಕು ಕಟ್ಟಿಕೊಳ್ಳಲು ನೆರವಾಯಿತು.-ಟಿ.ಸುಕನ್ಯಾ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ. ಬಿಎಸ್ ಡಬ್ಲ್ಯೂ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.