ADVERTISEMENT

ಆಲ್ದೂರು: ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಡಿಕೆ

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಕಟ್ಟಡ ಶಿಥಿಲಾವಸ್ಥೆಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 5:40 IST
Last Updated 16 ಸೆಪ್ಟೆಂಬರ್ 2023, 5:40 IST
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ   

ವರದಿ – ಜೋಸೆಫ್.ಎಂ

ಆಲ್ದೂರು: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, 79 ವರ್ಷಗಳು ಕಳೆದರೂ ಇದುವರೆಗೆ ನೂತನ ಕಟ್ಟಡದ ಭಾಗ್ಯ ಲಭಿಸಿಲ್ಲ. ಕಟ್ಟಡ ಮಾತ್ರವಲ್ಲ, ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾಡಬೇಕು ಎನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆ.

ಮಾಚಗೊಂಡನಹಳ್ಳಿ, ಆಣೂರು, ಜೇನುಗದ್ದೆ ಸುತ್ತ ಆರೋಗ್ಯ ಕೇಂದ್ರ ಇದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಜನರು ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿ ಒಟ್ಟು 24 ಹುದ್ದೆಗಳು ಇದ್ದು, 6 ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಕೆಲವರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಾಲಯ ತಂತ್ರಜ್ಞರು, ಗ್ರೂಪ್ ಡಿ ನೌಕರರು, ಪ್ರಮುಖ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುವ ತಂತ್ರಜ್ಞರು ಹಾಂದಿ ಮತ್ತು ಅತ್ತಿಗುಂಡಿಯಿಂದ ನಿಯೋಜನೆ  ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಾರದಲ್ಲಿ ನಾಲ್ಕು ದಿನ ಮಾತ್ರ ಇಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಪ್ರಯೋಗಾಲಯದ ವರದಿ ಸಕಾಲದಲ್ಲಿ ಸಿಗದೆ ಮಧುಮೇಹ ರೋಗಿಗಳು, ಗರ್ಭಿಣಿಯರಿಗೆ ತಪಾಸಣೆ, ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರವಾದರೆ ಎಂಬಿಬಿಎಸ್  ವೈದ್ಯಾಧಿಕಾರಿ, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಆಯುಷ್ ವೈದ್ಯರು, 30 ರಿಂದ 50 ರೋಗಿಗಳ ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಸೌಕರ್ಯ ಕೂಡ ಲಭ್ಯವಾಗಲಿದೆ.

ADVERTISEMENT

ಈ ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಹದೇವಸ್ವಾಮಿ ಉತ್ತಮ ಚಿಕಿತ್ಸೆ ಮೂಲಕ ಹೆಸರಾಗಿದ್ದರು. ಅವರು ವರ್ಗಾವಣೆ ಹೊಂದಿದ ಬಳಿಕ, ತಾತ್ಕಾಲಿಕ ವೈದ್ಯರು ಇದ್ದರೂ  ಸಮರ್ಪಕ ಆರೋಗ್ಯ ಸೇವೆ ದೊರೆಯದೆ ಬಡವರು, ಕೂಲಿ ಕಾರ್ಮಿಕರು ದುಬಾರಿ ವೆಚ್ಚ ತೆತ್ತು ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ ಎನ್ನುವುದು ಸ್ಥಳೀಯರ ದೂರು.

ಆರೋಗ್ಯ ಕೇಂದ್ರದ ಸಿಬ್ಬಂದಿಗಾಗಿ ನಿರ್ಮಿಸಿರುವ ಕಟ್ಟಡ ಕೂಡ ಶಿಥಿಲಾವಸ್ಥೆಯಲ್ಲಿವೆ.  ‘ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಮನವಿಯನ್ನು ಆರೋಗ್ಯ ಇಲಾಖೆಯ ಆಯುಕ್ತರಿಗೆ ರವಾನಿಸಲಾಗಿದ್ದು,  ಅಲ್ಲಿಂದ ಆರೋಗ್ಯ ಸಚಿವರ ಗಮನಕ್ಕೆ ತರಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಅಶ್ವತ್ಥ್ ಬಾಬು ಹೇಳಿದರು.

ಸರ್ವೆ ನಂಬರ್ 171ರಲ್ಲಿ 4 ಎಕರೆ 17 ಗುಂಟೆ ಜಾಗವನ್ನು ಆರೋಗ್ಯ ಕೇಂದ್ರ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ.  ಅರಣ್ಯ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಪ್ರಾದೇಶಿಕ ಅರಣ್ಯ ಇಲಾಖೆಯ ವರದಿ ಮತ್ತು ಅಂದಿನ ತಹಶೀಲ್ದಾರ್ ಮೂಲಕ ದಾಖಲಾತಿ ಕೆಲಸಗಳನ್ನು ಭಾಗಶಃ  ಪೂರೈಸಲಾಗಿದೆ. ತಾಲ್ಲೂಕು ಕಚೇರಿಯಲ್ಲಿ ಕಡತಗಳು ಇವೆ.  ನೂತನ ತಹಶೀಲ್ದಾರ್ ಅಧಿಕಾರ ಸ್ವೀಕರಿಸಿದ್ದು, ಅವರು ಆಸಕ್ತಿ ವಹಿಸಿ ಶೀಘ್ರವಾಗಿ ಈ ಕೆಲವನ್ನು  ಮುಗಿಸಬೇಕಾಗಿದೆ’ ಎಂದು ಪಂಚಾಯಿತಿ ಸದಸ್ಯ ಅರೇನೂರು ಲಕ್ಷ್ಮಣ್ ಗೌಡ ಹೇಳಿದರು.

1944ರಲ್ಲಿ 79 ವರ್ಷಗಳ ಹಿಂದೆ ನಿರ್ಮಾಣವಾದ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬು ಮನವಿಯನ್ನು ಈಗಾಗಲೇ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರಕ್ಕೂ ಪತ್ರ ಬರೆದು ಮನವಿ ಮಾಡಲಾಗಿದೆ
ನಯನಾ ಮೋಟಮ್ಮ ಶಾಸಕಿ
ಆರೋಗ್ಯ ಸಚಿವರ ಭರವಸೆ
ಈಚೆಗೆ ಆಲ್ದೂರಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಕಾಂಗ್ರೆಸ್ ಮುಖಂಡರಾದ ಎಚ್.ಎಸ್ ಕೃಷ್ಣೇಗೌಡ ಸವಿತಾ ರಮೇಶ್ ಆಲ್ದೂರು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಿದಂಬರ್ ಆಲ್ದೂರು ಕಾಫಿ ಬೆಳೆಗಾರರ ಹೋಬಳಿ ಅಧ್ಯಕ್ಷ ಸಿ ಸುರೇಶ್ಎ ಯು ಇಬ್ರಾಹಿಂ ಮನವಿ ಸಲ್ಲಿಸಿದರು. ‘ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಡಿಕೆ  ಬಂದಿದ್ದು ವರದಿಯನ್ನು ತರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.