ADVERTISEMENT

ಆಲ್ದೂರು: ಅಲೆಮಾರಿಗಳಿಗೆ ಇಲ್ಲ ಸೂರಿನ ಭಾಗ್ಯ

ಜೋಸೆಫ್ ಎಂ.ಆಲ್ದೂರು
Published 4 ಜನವರಿ 2024, 5:24 IST
Last Updated 4 ಜನವರಿ 2024, 5:24 IST
ನಿವೇಶನದ ಹಕ್ಕು ಪತ್ರ ತೋರಿಸುತ್ತಿರುವ ಕೆಳಗೂರು ಬಾಳೇಹಳ್ಳಿ ಕೃಷ್ಣಪ್ಪ ಬಡಾವಣೆಯ ಅಲೆಮಾರಿ ಸಮುದಾಯ ಗ್ರಾಮಸ್ಥರು.
ನಿವೇಶನದ ಹಕ್ಕು ಪತ್ರ ತೋರಿಸುತ್ತಿರುವ ಕೆಳಗೂರು ಬಾಳೇಹಳ್ಳಿ ಕೃಷ್ಣಪ್ಪ ಬಡಾವಣೆಯ ಅಲೆಮಾರಿ ಸಮುದಾಯ ಗ್ರಾಮಸ್ಥರು.   

ಆಲ್ದೂರು: ಸಮೀಪದ ಕೆಳಗೂರು ಪಂಚಾಯಿತಿ ವ್ಯಾಪ್ತಿಯ ಬಾಳೇಹಳ್ಳಿ ಕೃಷ್ಣಪ್ಪ ಬಡಾವಣೆಯ ಆದಿವಾಸಿ ಗಿರಿಜನರ 35 ಕುಟುಂಬಗಳಿಗೆ ಹಕ್ಕು ಪತ್ರ ದೊರೆತಿದ್ದರೂ ಸ್ವಂತ ಸೂರು ನಿರ್ಮಿಸಿಕೊಳ್ಳುವ ಭಾಗ್ಯ ಸಿಕ್ಕಿಲ್ಲ.

ಗ್ರಾಮಗಳಲ್ಲಿ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಅಸಲರ 35 ಕುಟುಂಬಗಳ 100ಕ್ಕೂ ಹೆಚ್ಚು ಮಂದಿ ಇಲ್ಲಿ ನೆಲೆಸಿದ್ದಾರೆ. ನಿವೇಶನಕ್ಕಾಗಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, ‌ಹಕ್ಕು ಪತ್ರ ಒದಗಿಸುವುದಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು 10 ವರ್ಷಗಳಿಂದ ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ.

‘ವಾಸವಿರುವ ಜಾಗ ಪರಿಭಾವಿತ(ಡೀಮ್ಡ್‌) ಅರಣ್ಯ ಎಂದು ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗ ವರದಿ ನೀಡಿದ್ದರು. ಬಳಿಕ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರು’ ಎಂದು ಗ್ರಾಮದ ಮುಖಂಡ ನೀಲಯ್ಯ ಆರೋಪಿಸಿದರು.

ADVERTISEMENT

‘ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು. ಆಗ ಸ್ಥಳ ಪರಿಶೀಲನೆ ಮಾಡಿದ ಅಂದಿನ ತಹಶೀಲ್ದಾರ್ ನಂದಕುಮಾರ್ ಅವರು ಹಕ್ಕು ಪತ್ರ ವಿತರಿಸಿದರು. ಆದರೆ, ಈ ಹಕ್ಕುಪತ್ರ ಸೂರಿನಿಂದ ಸೂರಿನ ತನಕ ಮಾತ್ರ ಇದ್ದು, ಸ್ನಾನಗೃಹ, ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು. ಬಳಿಕ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮೂಲಕ ಹೋರಾಟ ಆರಂಭಿಸಿದೆವು’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದ ರೇಖಾ ಅನಿಲ್ ಅವರ ಮೂಲಕ ಉಪ ವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಿ ಕಷ್ಟ ಹೇಳಿಕೊಂಡಿದ್ದೆವು. ಆಗ ಅವರು ಈ ಹಿಂದೆ ನೀಡಿದ ಹಕ್ಕು ಪತ್ರ ವಾಪಸ್ ಪಡೆದು 40x30 ಅಡಿ ಅಳತೆಯ ನಿವೇಶನದ ಹಕ್ಕು ಪತ್ರ ವಿತರಿಸುವಂತೆ ಆದೇಶ ಮಾಡಿದರು. ಅಂದಿನ ಶಾಸಕ ಎಂ.ಪಿ. ಕುಮಾರಸ್ವಾಮಿ ಬಳಿ ಹಲವು ಬಾರಿ ಮನವಿ ಮಾಡಲಾಯಿತು. ಅವರ ಅಧಿಕಾರ ಅವಧಿಯ ಕೊನೆಯ ವರ್ಷದಲ್ಲಿ 2021ರಲ್ಲಿ ಹಕ್ಕು ಪತ್ರ ಒದಗಿಸಿದರು ಎಂದು ಹೇಳಿದರು.

‘ಹಲವು ವರ್ಷಗಳ ನಿರಂತರ ಹೋರಾಟದ ಬಳಿಕ ನಿವೇಶನದ ಹಕ್ಕು ಪತ್ರಗಳು ದೊರೆತಿವೆ. ವಿದ್ಯುತ್ ಸಂಪರ್ಕವನ್ನೂ ಹೋರಾಟದ ಮೂಲಕವೇ ಪಡೆಯಲಾಯಿತು. ಆದರೆ, ಸ್ವಂತ ಸೂರು ನಿರ್ಮಿಸಿಕೊಳ್ಳುವ ಕನಸು ನನಸಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಿ ನಯನಾ ಮೋಟಮ್ಮ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಕೋಶದ ಮೂಲಕ ಮನೆ ನಿರ್ಮಾಣಕ್ಕೆ ₹300 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆ ಹಣ ವಾಪಸ್ ಹೋಗಿದ್ದು, ಸಮಾಜ ಕಲ್ಯಾಣ ಇಲಾಖೆ ಮೂಲಕವೇ ಯೋಜನೆಗಳು ರೂಪುಗೊಳ್ಳಬೇಕಿದೆ ಎಂದು ಸಮಗ್ರ ಗಿರಿಜನ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ಎಚ್.ಸಿ. ಭಾಗಿರಥಿ ತಿಳಿಸಿದರು.

ನನಗೀಗ 62 ವಯಸ್ಸು. ಬಾಲ್ಯದಿಂದಲೂ ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಹೊತ್ತಿದ್ದೇನೆ. ಆ ಕನಸು ಇನ್ನೂ ಪರಿಪೂರ್ಣವಾಗಿಲ್ಲ. ಸ್ವಂತ ಸೂರಿನಡಿ ಬದುಕಿ ಪ್ರಾಣ ಬಿಡಬೇಕು ಎಂದುಕೊಂಡಿದ್ದೇನೆ
–ಗಿರಿಜಾ, ನಿವಾಸಿ
ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮನೆ ಮಂಜೂರಾತಿ ಯೋಜನೆಗಳು ಜಾರಿಯಾದಾಗ ಅಗತ್ಯ ಕ್ರಮ ಕೈಗೊಳ್ಳಲಾಗುವುದು
–ನಯನಾ, ಮೋಟಮ್ಮ ಶಾಸಕಿ 

Cut-off box - ಸ್ವಂತ ಸೂರಿಲ್ಲ; ಸ್ಮಶಾನವೂ ಇಲ್ಲ ‘ಎಲ್ಲರೂ ಕೂಲಿ ಕೆಲಸ ಮಾಡಿಕೊಂಡೇ ಜೀವನ ನಡೆಸುತ್ತಿದ್ದು ಟಾರ್ಪಲ್‌ಗಳಿಂದ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಂಡಿದ್ದೇವೆ. ಪ್ರತಿ ಮಳೆಗೂ ಮನೆಯ ಹೆಂಚು ಹಾರಿ ಹೋಗುತ್ತಿವೆ’ ಎಂದು ನಿವಾಸಿ ಮಂಜುನಾಥ್ ಹೇಳಿದರು. ‘ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲದೆ ಕೆಸರಿನ ನೀರು ಮನೆಯೊಳಗೆ ಬರುತ್ತಿದೆ. ಮಳೆಗಾಲದಲ್ಲಿ ಚಾವಣಿ ಸರಿಪಡಿಸಲು ₹10 ಸಾವಿರ ಮೀಸಲಿಡಬೇಕಾಗಿದೆ. ಶವಸಂಸ್ಕಾರ ಮಾಡಲು ಇರುವಂತ ಸ್ಮಶಾನದ ದಾಖಲಾತಿ ಕೂಡ ನಮ್ಮ ಬಳಿ ಇಲ್ಲ. ಬದುಕಿರುವಾಗಲೂ ನೆಮ್ಮದಿಯ ಸೂರಿಲ್ಲ ಸತ್ತ ಬಳಿಕ ಅಂತ್ಯಕ್ರಿಯೆಗೂ ಜಾಗವಿಲ್ಲ’ ಎಂದು ಅವರು ನೋವು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.