ಆಲ್ದೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣಗೋಡೆಯ ಎದುರು ರಾತ್ರಿ ವೇಳೆ ಜೆಜೆಎಂ ಗುತ್ತಿಗೆದಾರ ಅನಧಿಕೃತವಾಗಿ ಬೋರ್‌ವೆಲ್ ಕೊರೆದ ಪರಿಣಾಮ, ಶಾಲೆಯ ನಾಲ್ಕು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ.
ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಇದಕ್ಕೆ ತೀವ್ರ ಆಕ್ರೋಶ ಪಡಿಸಿದ್ದು, ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದೆ. ದೂರಿನ ಹಿನ್ನೆಲೆಯಲ್ಲಿ ಗುರುವಾರ ಶಾಲೆಗೆ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ,ಕ್ ಷೇತ್ರ ಶಿಕ್ಷಣಾಧಿಕಾರಿ ರತೀಶ್ ಎಚ್.ಸಿ. ಭೇಟಿ ಕೊಠಡಿ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದರು.
ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ‘ ಅನಧಿಕೃತವಾಗಿ ಶಾಲಾ ಆವರಣಗೋಡೆ ಎದುರು ಕೊಳವೆಬಾವಿ ಕೊರೆದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗುವುದು ಎಂದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚೇತನ್ ಕುಮಾರ್ ಮಾತನಾಡಿ, ‘ಹಾನಿಯಾಗಿರುವ ಶಾಲಾ ಕೊಠಡಿಗಳ ಗೋಡೆಗಳನ್ನು ಪರಿಶೀಲಿಸಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುತ್ತೇನೆ’ ಎಂದರು. ಸಹಾಯಕ ಎಂಜಿನಿಯರ್ ಸಂತೋಷ್ ಕಾಮತ್ ಇದ್ದರು.
‘ಕಾನೂನುಬಾಹಿರವಾಗಿ ಬೋರ್‌ವೆಲ್ ಕೊರೆದ ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ, ರಾಷ್ಟ್ರಪತಿಗೆ ವಿದ್ಯಾರ್ಥಿಗಳಿಂದ ಪತ್ರ ಬರೆಯಿಸಲಾಗುವುದು. ದಪೋಷಕರು, ಸ್ಥಳೀಯರು, ಹಳೆಯ ವಿದ್ಯಾರ್ಥಿಗಳ ಸಹಕಾರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಸ್.ಡಿ.ಎಂ .ಸಿ ಅಧ್ಯಕ್ಷ ಎ.ಯು.ಇಬ್ರಾಹಿಂ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿನಾಯಕ ಜಿ.ಹುಲ್ಲೂರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ‘ರಾತ್ರಿ ವೇಳೆ ಬೋರ್‌ವೆಲ್ ಕೊರೆದಿದ್ದು, ಇದಕ್ಕೆ ಹೊಣೆ ಗುತ್ತಿಗೆದಾರರೇ ಆಗಿರುತ್ತಾರೆ. ಇವರ ವಿರುದ್ಧ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ನೀಡಲಾಗುವುದು ಮತ್ತು ಕ್ಷಿಪ್ರ ಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸಹಾಯಕ ಎಂಜಿನಿಯರ್ ಪವನ್, ಮುಖ್ಯ ಶಿಕ್ಷಕ ಸುರೇಶ್ ಸಿ.ಎಸ್, ಆಲ್ದೂರು ಪಂಚಾಯಿತಿ ಉಪಾಧ್ಯಕ್ಷ ಎಸ್.ಕೆ.ಲಿಂಗೇಗೌಡ, ಪಿಡಿಒ ಶಂಶೂನ್ ನಹರ್, ಅರೇನೂರು ಸುಪ್ರೀತ್, ಹಳೆಯ ವಿದ್ಯಾರ್ಥಿ ಅಕ್ಬರ ಅಲಿ, ಮಣಿಕಂಠ, ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.