ಚಿಕ್ಕಮಗಳೂರು: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ನೀಡುವಲ್ಲಿ ಕರ್ತವ್ಯ ಲೋಪವಾಗಿದ್ದು, ಅಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ವೈದ್ಯಾಧಿಕಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯವನ್ನು ಹೊರತರಬೇಕು ಎಂದು ಬಿಕ್ಕೆಮನೆ ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಸುಂದರಗೌಡ ಒತ್ತಾಯಿಸಿದರು.
ಪ್ರಕರಣದಲ್ಲಿ ಸಂತೋಷ್ ರಾವ್‌ಗೆ ಈಗ ಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ. ಇದರಿಂದ ಪ್ರಕರಣದಲ್ಲಿ ನೈಜ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅಂದು ಎಫ್‌ಐಆರ್ ದಾಖಲಿಸಿದ್ದ ಪೊಲೀಸ್ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ದಾಖಲೆ, ಸಾಕ್ಷ್ಯಾಧಾರ ಕೋರ್ಟ್‌ಗೆ ಸಲ್ಲಿಸುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.
11 ವರ್ಷದ ಪ್ರಕರಣಕ್ಕೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಮರೆಮಾಚಿ ಸಂತೋಷ್‌ರಾವ್ ಎಂಬಾತನಿಗೆ ಶಿಕ್ಷೆಯಾಗುವಂತೆ ಮಾಡಲಾಗಿದೆ. ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮೃತ ಸೌಜನ್ಯಾ ಹಾಗೂ ಸಂತೋಷ್‌ರಾವ್‌ಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ರಾಜ್ಯ ಸರ್ಕಾರ ಮರುತನಿಖೆಗೆ ಹಿಂದೇಟು ಹಾಕುತ್ತಿದೆ. ಆರೋಪಿಗಳ ಪತ್ತೆಹಚ್ಚಿ ಸತ್ಯ ಬಯಲಿಗೆಳೆಯಲು ಮಾನವ ಹಕ್ಕುಗಳ ಆಯೋಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದೂರು ದಾಖಲಿಸಬೇಕು. ಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ನೇಚರ್ ಕನ್ಸರ್ ವೇಷನ್ ಟ್ರಸ್ಟ್‌ನ ಸದಸ್ಯೆ ನಾಸೀರ್ ಬೇಗಂ, ಶೃತಿ, ಶ್ವೇತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.