ಜಯಪುರ(ಬಾಳೆಹೊನ್ನೂರು): ಅತಿವೃಷ್ಟಿಯಿಂದ ಎರಡು ವರ್ಷಗಳ ಹಿಂದೆ ಮನೆ ಕಳೆದುಕೊಂಡ ವೃದ್ಧ ದಂಪತಿಗೆ ಇನ್ನೂ ಪರಿಹಾರ ಸರಿಯಾಗಿ ತಲುಪದ ಕಾರಣ, ದಂಪತಿಯು ಜಯಪುರದ ಚರ್ಚ್ ಬಳಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪಾಳುಬಿದ್ದ ವಸತಿಗೃಹದಲ್ಲೇ ಬದುಕು ಸಾಗಿಸುತ್ತಿದ್ದಾರೆ.
ಅಲಗೇಶ್ವರ ರಸ್ತೆಯ ಚೌಡಿಕಟ್ಟೆ ಬಳಿಯ ವೇಲಾಯುಧನ್– ರುಕ್ಮಿಣಿ ದಂಪತಿ ವಾಸವಿದ್ದ ಮನೆ 2021ರಲ್ಲಿ ಕುಸಿದು ಬಿದ್ದಿತ್ತು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಶಾಸಕರು, ‘ಶೀಘ್ರದಲ್ಲೇ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುವುದು’ ಎಂದು ಆಶ್ವಾಸನೆ ನೀಡಿ ಹೋಗಿದ್ದರು.
ವೇಲಾಯುಧನ್ ಮತ್ತು ರುಕ್ಮಿಣಿ ಅವರು ಸಂಬಂಧಪಟ್ಟ ಇಲಾಖೆಗೆ ಎಲ್ಲ ದಾಖಲೆಗಳನ್ನು ನೀಡಿ, ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮನೆ ಸಂಪೂರ್ಣ ಉರುಳಿ ಬಿದ್ದಿದ್ದರೂ, ಮನೆ ದುರಸ್ತಿಗಾಗಿ ₹1 ಲಕ್ಷ ಅನುದಾನ ನೀಡಲಾಗಿದೆ. ಆ ಹಣದಲ್ಲಿ ಮನೆ ನಿರ್ಮಿಸಲು ಸಾಧ್ಯವಾಗದೆ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ, ಅಂತಿಮವಾಗಿ ಪಟ್ಟಣದಲ್ಲಿ ಪಾಳು ಬಿದ್ದ ಲೋಕೋಪಯೋಗಿ ಇಲಾಖೆಯ ವಸತಿಗೃಹವನ್ನು ಆಶ್ರಯಿಸಿದೆ.
‘ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವ ಭರವಸೆ ಕೊಟ್ಟು ಹೋಗಿದ್ದಾರೆ. ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಕೊನೆಗಾಲದಲ್ಲಿ ಪಾಳು ಬಿದ್ದ ಈ ಕಟ್ಟಡದಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಕಣ್ಣೀರು ಹಾಕುತ್ತಾರೆ ವೇಲಾಯುಧನ್ ಹಾಗೂ ರುಕ್ಮಿಣಿ ದಂಪತಿ.
‘ಒಂದು ವರ್ಷದ ಹಿಂದೆಯೇ ಇವರ ದಾಖಲೆಗಳನ್ನು ಕೊಪ್ಪ ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಅನಂತರದ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ’ ಜಯಪುರದ ನಾಡ ಕಚೇರಿಯ ಕಂದಾಯ ನಿರೀಕ್ಷಕ ಸುಧೀರ್.
ಈ ಬಗ್ಗೆ ಮಾಹಿತಿ ಪಡೆಯಲು ಜಯಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಮನೆ ಇಲ್ಲದೆ ವೃದ್ಧ ದಂಪತಿ ಸಂಕಷ್ಟದಲ್ಲಿದ್ದು, ಮೇ 18ರ 2022ರಂದು ರಾಜೀವ್ ಗಾಂಧಿ ವಸತಿ ನಿಗಮವು ಇವರಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ನೀಡಿದೆ. ಆದರೆ ಸರ್ಕಾರದಿಂದ ಮಂಜೂರಾದ ಹಣ ಬಿಡುಗಡೆಯಾಗದ ಕಾರಣ, ಮನೆ ಕಟ್ಟಲು ಆರ್ಥಿಕ ಸಮಸ್ಯೆ ಎದುರಾಗಿದೆ. ಆದ್ದರಿಂದ ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಬೇಕು ಎಂದು ಸಮಾಜ ಸೇವಕ ಅಣ್ಣು ಮಂಜುನಾಥ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.