ಚಿಕ್ಕಮಗಳೂರು:‘ಮೋದಿ ಎಂದು ಕೂಗುವವರಿಗೆ ಕಪಾಳಕ್ಕೆ ಹೊಡೆಯಿರಿ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ ತಂಗಡಗಿ ಕ್ಷಮೆ ಯಾಚಿಸಬೇಕು. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ದೇಶದ ಪ್ರಧಾನಿ ಗುರಿಯಾಗಿಸಿಕೊಂಡು ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ತಮ್ಮ ಖಾತೆಗೆ ವಿರುದ್ಧವಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಹಿಂದೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಕೂಡ ನರೇಂದ್ರ ಮೋದಿ ಅವರನ್ನು ಹಗುರ ಪದಗಳಿಂದ ಟೀಕಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸಂಸ್ಕೃತಿ ಎಂಬುದೇ ತಿಳಿದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 10 ವರ್ಷದ ಆಡಳಿತದಲ್ಲಿ ದೇಶ ಬದಲಾವಣೆ ಕಂಡಿದೆ. ಜಗತ್ತಿನ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಅಭಿವೃದ್ಧಿಯನ್ನು ಸಹಿಸಲಾಗದೆ ಕಾಂಗ್ರೆಸ್‌ಗೆ ಉರಿ ಹತ್ತಿದೆ. ಚುನಾವಣೆ ಸೋಲಿನ ಭೀತಿಯೂ ಶುರುವಾಗಿದ್ದು, ದಿಕ್ಕು ತಪ್ಪಿ ಮನಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ರಾಜ್ಯದ ಜನತೆಯೇ ಅವರ ಕಾಪಾಳಕ್ಕೆ ಹೊಡೆಯಲಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಈಗ ಬರಪರಿಹಾರದ ನೆಪದಲ್ಲಿ ಜನರ ಆಕ್ರೋಶವನ್ನು ಬೇರೆಡೆಗೆ ಸೆಳೆಯಲು ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದೆ. ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದವರ ಕಾಪಾಳಕ್ಕೆ ಹೊಡೆಯಲಾಗದವರು ಅವರನ್ನೇ ಸಮರ್ಥನೆ ಮಾಡಿಕೊಂಡು ಆರೋಪಿಗಳಿಗೆ ಜಾಮೀನು ಸಿಗುವಂತೆ ಮಾಡಿದರು ಎಂದು ಆಪಾದಿಸಿದರು.
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸಿದೆ. ಸದ್ಯ ಎನ್‌ಐಎ ತನಿಖೆ ಕೈಗೊಂಡಿದ್ದು, ವಿಚಾರಣೆ ವೇಳೆ ತೀರ್ಥಹಳ್ಳಿಯ ಕೆಲ ಗ್ರಾಮಗಳಲ್ಲಿಯೂ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದ್ದು, ಸಂಪರ್ಕದ ನಂಟು ತಾಲ್ಲೂಕಿನಲ್ಲಿಯೂ ಇರುವುದು ತಲೆ ತಗ್ಗಿಸುವ ಸಂಗತಿ. ತನಿಖಾ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವ ಆಶಾಭಾವನೆ ಇದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ಸಚಿವರ ಹೇಳಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಿಡಿದು ಘೋಷಣೆ ಕೂಗುತ್ತಿದ್ದ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವುದು ಖಂಡನೀಯ. ಜಿಲ್ಲಾಡಳಿತ ಕಾಂಗ್ರೆಸ್ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಸೋಮಶೇಖರ್, ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಭಾಗಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.