ಶೃಂಗೇರಿ: ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕೆ ರೋಗವು ವ್ಯಾಪಕವಾಗಿ ಹರಡಿದ್ದು, ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೈಸೂರಿನ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಹೇಳಿದರು.
ಶೃಂಗೇರಿಯ ಮೆಣಸೆ ಗ್ರಾಮ ಪಂಚಾಯಿತಿಯ ಮಸಿಗೆ ಗ್ರಾಮದ ಕೆರೆಮನೆ ಭಾಸ್ಕರ ರಾವ್, ದಿನೇಶ್ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಹವಾಮಾನ ವೈಪರೀತ್ಯದ ನಡುವೆ ಅಡಿಕೆಗೆ ಎಲೆಚುಕ್ಕೆ ರೋಗ ಹರಡಿದ್ದು, ಫಸಲು ಹಾಗೂ ತೋಟಕ್ಕೆ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ ಹಳದಿ ಎಲೆ ರೋಗದೊಂದಿಗೆ ಎಲೆಚುಕ್ಕೆ ರೋಗವು ಇದ್ದು, ಮರಗಳು ಬೇಗ ಸಾಯುತ್ತಿವೆ. ಅಡಿಕೆ ನರ್ಸರಿಯಿಂದ ದೊಡ್ಡ ಮರಗಳಿಗೆ ರೋಗ ತಗುಲುತ್ತಿದ್ದು. ಈಗಾಗಲೇ ತೋಟಗಾರಿಕೆ ಇಲಾಖೆ ರೋಗ ನಿಯಂತ್ರಣಕ್ಕೆ ಔಷಧವನ್ನು ಶಿಫಾರಸು ಮಾಡಿದ್ದು, ಮುನ್ನೆಚ್ಚರಿಕೆ ಕ್ರಮದಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ’ ಎಂದರು.
ಕೃಷಿಕ ಕೆರೆಮನೆ ಭಾಸ್ಕರರಾವ್ ಮಾತನಾಡಿ, ‘ನಾಲ್ಕು ವರ್ಷಗಳಿಂದ ಮಳೆ ಪ್ರಮಾಣ ಹೆಚ್ಚಳವು ರೋಗ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ತೋಟಗಾರಿಕಾ ಅಧಿಕಾರಿಗಳು ತಾಲ್ಲೂಕಿನ ರೋಗಪೀಡಿತ ತೋಟಗಳಿಗೆ ಭೇಟಿ ನೀಡಿದರು. ಮೈಸೂರಿನ ತೋಟಗಾರಿಕೆ ಇಲಾಖೆಯ ಅಂಕಿತ್, ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಕೃಷಿಕರಾದ ಭರತ್ ರಾಜ್, ಸಸಿಮನೆ ಶಿವಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.