ADVERTISEMENT

ಕಳಸ | ಹೆಚ್ಚಿದ ತಾಪಮಾನ: ಅಡಿಕೆ, ಕಾಫಿಗೆ ಕುತ್ತು

ವಾಣಿಜ್ಯ ಬೆಳೆಗಳಿಗೆ ಪ್ರತಿಕೂಲ ಹವಾಮಾನ

ರವಿ ಕೆಳಂಗಡಿ
Published 5 ಮೇ 2024, 6:40 IST
Last Updated 5 ಮೇ 2024, 6:40 IST
ಕಳಸ ತಾಲ್ಲೂಕಿನಲ್ಲಿ ಅಡಿಕೆ ಮಿಡಿಗಳು ಉದುರಿರುವುದು
ಕಳಸ ತಾಲ್ಲೂಕಿನಲ್ಲಿ ಅಡಿಕೆ ಮಿಡಿಗಳು ಉದುರಿರುವುದು   

ಕಳಸ: ತಾಲ್ಲೂಕಿನಾದ್ಯಂತ ಬೇಸಿಗೆಯ ಬಿಸಿ ಹಿಂದೆಂದೂ ಕಾಣದ ಮಟ್ಟಕ್ಕೆ ಏರುತ್ತಿದೆ. ಇದು ಕಾಫಿ, ಅಡಿಕೆ ಬೆಳೆಗಳಿಗೆ ಹಾನಿ ಉಂಟು ಮಾಡುತ್ತಿದೆ.

ತಾಲ್ಲೂಕಿನಲ್ಲಿ ತಾಪಮಾನ 35 ಡಿಗ್ರಿವರೆಗೂ ಏರುತ್ತಿದ್ದು, ವಾಣಿಜ್ಯ ಬೆಳೆಗಳಿಗೆ ಪ್ರತಿಕೂಲ ಹವಾಮಾನ ಸೃಷ್ಟಿಯಾಗುತ್ತಿದೆ. ಬಿಸಿ ಹವೆ ಮತ್ತು ತೇವಾಂಶದ ಕೊರತೆ ಕಾರಣಕ್ಕೆ ಅಡಿಕೆ ಮಿಡಿಗಳು ಕಳಚಿ ಬೀಳುತ್ತಿವೆ.
ತಾಲ್ಲೂಕಿನಲ್ಲಿ ಈ ಬಾರಿ ಬೇಸಿಗೆ ಮಳೆಯು 75 ರಿಂದ 125 ಮಿ.ಮೀ ಸುರಿದಿದೆ. ಇದು ಉತ್ತಮ ಮಳೆ ಪ್ರಮಾಣವೇ ಆಗಿದ್ದರೂ ಬಿಸಿಲಿನ ಬೇಗೆ ತೇವಾಂಶವನ್ನು ಇಲ್ಲವಾಗಿಸುತ್ತಿದೆ.

ಸುಡುಬಿಸಿಲು ಕಾಫಿ ಮಿಡಿಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿವೆ. ಈಗಾಗಲೇ ಮರಗಸಿ ಮಾಡಿದ ತೋಟಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿ ಮಿಡಿ ಕರಟಲು ಆರಂಭಿಸಿದೆ. ಇನ್ನಷ್ಟು ಮಳೆ ಬೀಳುವವರೆಗೆ ಮರಗಸಿ ಮುಂದೂಡುವುದು ಒಳಿತು ಎಂದು ಅನುಭವಿ ಬೆಳೆಗಾರರು ಸಲಹೆ ನೀಡುತ್ತಿದ್ದಾರೆ.

ADVERTISEMENT

ಬಿಸಿಲಿನ ಬೇಗೆ ಹೀಗೇ ಮುಂದುವರೆದರೆ ಕಾಫಿ ಇಳುವರಿ ಕುಸಿಯುವುದು ಖಚಿತ. ಉತ್ತಮ ಧಾರಣೆಯ ಫಲ ಮುಂದಿನ ವರ್ಷಕ್ಕೂ ಸಿಗುವುದು ಅನುಮಾನ ಎಂದು ಬೆಳೆಗಾರ ರಜಿತ್ ಕೆಳಗೂರು ಅಭಿಪ್ರಾಯ ಪಡುತ್ತಾರೆ.

ಮಳೆ ಕೊರತೆ ಮತ್ತು ಹೆಚ್ಚಿದ ಬಿಸಿಲು ಕಾಳುಮೆಣಸಿನ ಬಳ್ಳಿಗೂ ಹಾನಿ ಮಾಡುತ್ತಿದೆ. ಬಳ್ಳಿಗಳ ಬೆಳವಣಿಗೆ ನಿಂತಿದ್ದು ಎಲೆಗಳು ಬಾಡುತ್ತಿವೆ. ಇದು ಬಳ್ಳಿಯ ಆರೋಗ್ಯ ಮತ್ತು ಮುಂದಿನ ಸಾಲಿನ ಇಳುವರಿ ಮೇಲೆ ಪರಿಣಾಮ ಬೀರುವ ಆತಂಕ ಇದೆ. ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ ಬಿಸಿಲಿನ ಝಳದಿಂದ ಬಳಲುತ್ತಿದ್ದಾರೆ. ಸುಡುಬಿಸಿಲಿನಲ್ಲಿ ಅವರು ಆಯಾಸಗೊಳ್ಳುತ್ತಿದ್ದು, ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗೂ ಮಳೆ ಮಾತ್ರ ಪರಿಹಾರ ಆಗಲಿದೆ ಎನ್ನುತ್ತಾರೆ ರೈತರು.

ಈಗಿನ ಬಿಸಿಲು ಅಡಿಕೆಗೆ ಭಾರಿ ಹೊಡೆತ ಕೊಡುತ್ತದೆ. ಮೇ ತಿಂಗಳಲ್ಲೂ ತೋಟಕ್ಕೆ ನೀರು ಕೊಡುವ ಪರಿಸ್ಥಿತಿ ಬಂದಿರುವುದು ದುರ್ದೈವ.
-ಜೇನುಗೂಡು ಸುರೇಶ್, ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.