ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಸತಿಗೃಹ ಸೌಲಭ್ಯ ಇದ್ದರೂ, 24×7 ವೈದ್ಯಕೀಯ ಸೌಲಭ್ಯ ರೋಗಿಗಳಿಗೆ ಸಿಗುತ್ತಿಲ್ಲ. ಹಗಲು ಹೊತ್ತಿನಲ್ಲಿ ಮಾತ್ರ ವೈದ್ಯಕೀಯ ಸೌಲಭ್ಯ ಜನರಿಗೆ ಸಿಗುತ್ತಿದೆ. ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ, ಇಲ್ಲಿ 24×7 ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ.
ಬಣಕಲ್ ಹಲವು ಹಳ್ಳಿಗಳನ್ನು ಹೊಂದಿರುವ ವಿಸ್ತಾರ ಹೋಬಳಿ ಕೇಂದ್ರವಾಗಿದ್ದು, ಇದರ ವ್ಯಾಪ್ತಿಗೆ ಸೇರಿದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿರುತ್ತದೆ. ತುರ್ತು ಸಂದರ್ಭದಲ್ಲಿ ಗಾಯಾಳುಗಳನ್ನು ರಾತ್ರಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರು ಲಭ್ಯರಿರುವುದಿಲ್ಲ. ಮಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಬೇಕು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿದರೆ ಬಣಕಲ್, ಬಾಳೂರು ಹೋಬಳಿಯ 40ಕಿ.ಮೀ ವ್ಯಾಪ್ತಿಯ ಹಲವು ಹಳ್ಳಿಗಳ ಜನರಿಗೆ ಪ್ರಯೋಜನವಾಗಲಿದೆ. ‘ ಎಲ್ಲ ಸೌಲಭ್ಯಗಳು ಇದ್ದರೂ ಬಣಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಮೀನಮೇಷ ಎಣಿಸಲಾಗುತ್ತಿದೆ'ಎಂದು ಸ್ಥಳೀಯ ಮುಖಂಡ ಅರುಣ್ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 6ಕ್ಕೂ ಹೆಚ್ಚು ವಸತಿಗೃಹಗಳಿದ್ದು, ಅವುಗಳಲ್ಲಿ ಒಂದೆರಡು ವಸತಿಗೃಹದಲ್ಲಿ ಮಾತ್ರ ಸಿಬ್ಬಂದಿ ವಾಸವಾಗಿದ್ದಾರೆ. ಉಳಿದೆಡೆ ಸಿಬ್ಬಂದಿ ವಾಸವಿಲ್ಲದೆ, ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿದೆ.
ಜನಸಂಖ್ಯೆ ಆಧಾರದ ಮೇಲೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ನಿಯಮ. ಬಣಕಲ್‌ನಲ್ಲಿ ಜನಸಂಖ್ಯೆ ಕಡಿಮೆಯಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು.-ಅಶ್ವತ್ಥ್ ಬಾಬು ಡಿಎಚ್‌ಒ
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಸ್ಥಳೀಯರ ನಿಯೋಗ ತೆರಳಿ ಆರೋಗ್ಯ ಸಚಿವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದೇವೆ- ಹರ್ಷ ಮೆಲ್ವಿನ್ ಲಸ್ರಾದೊ ಅಲ್ಪಸಂಖ್ಯಾತ ರಾಜ್ಯ ಘಟಕದ ಉಪಾಧ್ಯಕ್ಷ
ಬಣಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಜನರು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗುವ ಅಗತ್ಯವಿಲ್ಲ. ಈ ಭಾಗದಲ್ಲಿ 24×7 ವೈದ್ಯಕೀಯ ಸೇವೆ ಅಗತ್ಯವಾಗಿದೆ-ಮೊಹಮ್ಮದ್ ಇಮ್ರಾನ್ ರಿವರ್ ವ್ಯೂವ್ ಶಾಲಾ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.