ADVERTISEMENT

ಬೀರೂರು | ಆವಾಸ್ ಯೋಜನೆ: ನನಸಾಗದ ಸ್ವಂತ ಸೂರಿನ ಕನಸು

ಬೀರೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಮಂಜೂರಾಗಿದ್ದ ಡಿಡಿ ಮನೆಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 7:21 IST
Last Updated 26 ಅಕ್ಟೋಬರ್ 2024, 7:21 IST
ಬೀರೂರಿನ ಸರಸ್ವತೀಪುರಂ ಬಡಾವಣೆಯಲ್ಲಿ ಅಪೂರ್ಣಗೊಂಡಿರುವ ಡಿಡಿ ಮನೆ  
ಬೀರೂರಿನ ಸರಸ್ವತೀಪುರಂ ಬಡಾವಣೆಯಲ್ಲಿ ಅಪೂರ್ಣಗೊಂಡಿರುವ ಡಿಡಿ ಮನೆ      

ಬೀರೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪಟ್ಟಣದ  ಕೊಳೆಗೇರಿಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಮಂಜೂರುಮಾಡಿದ್ದ ಡಿ.ಡಿ ಮನೆಗಳ ನಿರ್ಮಾಣ ಅಪೂರ್ಣಗೊಂಡಿದ್ದು ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಯೋಜನೆಗೆ ಆಯ್ಕೆಯಾದ ಪರಿಶಿಷ್ಟ ವರ್ಗದ ಫಲಾನುಭವಿಗಳು ₹63,280 ಮೊತ್ತವನ್ನು ಡಿಡಿ ರೂಪದಲ್ಲಿ ಮಂಡಳಿಗೆ ಪಾವತಿಸಬೇಕು. ಇದರ ಜತೆಗೆ ಬ್ಯಾಂಕ್‌ನಿಂದ ₹2,54,218 ಸಾಲ ಪಡೆಯಬೇಕು. ಒಟ್ಟು ₹3,17,498 ಮೊತ್ತಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಪಡೆದು ಫಲಾನುಭವಿಗೆ ಮಂಡಳಿಯು ಮನೆ ನಿರ್ಮಿಸಿಕೊಡಬೇಕಿತ್ತು. ಇದಕ್ಕಾಗಿ ಫಲಾನುಭವಿ  ತನ್ನ ಖಾಲಿ ನಿವೇಶನವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕಿತ್ತು. ಇತರೆ ವರ್ಗದವರಾದರೆ ₹94,920 ಮೊತ್ತದ ಡಿ ಡಿ ಹಾಗೂ ₹3,02,578 ಬ್ಯಾಂಕ್ ಸಾಲ, ಜತೆಗೆ ಸರ್ಕಾರದ ಸಹಾಯಧನ ಸೇರಿಸಿ ₹6.67 ಲಕ್ಷ ವೆಚ್ಚದಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಹಾಲ್, ಶೌಚಗೃಹ ಒಳಗೊಂಡ 330 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಡಬೇಕಿತ್ತು.

ಬೀರೂರು ಪಟ್ಟಣ ವ್ಯಾಪ್ತಿಯ ಜಲಗಿರಿಬಾವಿ ಬೀದಿ, ಭೋವಿ ಕಾಲೋನಿ, ಬಳ್ಳಾರಿ ಕ್ಯಾಂಪ್, ಅಂಬೇಡ್ಕರ್ ನಗರ, ಸರಸ್ವತಿಪುರಂ ಬಡಾವಣೆ, ಮರಾಠ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಒಟ್ಟು 300 ಮನೆಗಳ ನಿರ್ಮಾಣಕ್ಕೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಅನುಮೋದನೆ ಲಭಿಸಿತ್ತು. ಅಂದಿನ ಶಾಸಕ ಬೆಳ್ಳಿ ಪ್ರಕಾಶ್ 2023ರ ಮಾರ್ಚ್ ತಿಂಗಳಿನಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಯೋಜನೆಗೆ ಒಪ್ಪಿಗೆ ಸೂಚಿಸಿದ್ದ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು 40 ಕುಟುಂಬಗಳು ಮಂಡಳಿ ಸೂಚಿಸಿದ ಮೊತ್ತಕ್ಕೆ ಡಿಡಿ ತೆಗೆದು, ತಮ್ಮ ನಿವೇಶನಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿದ್ದರು. ಕೆಲವು ಫಲಾನುಭವಿಗಳು ತಾವು ವಾಸವಿದ್ದ ಮನೆಯನ್ನು ಕೆಡವಿ, ನಿವೇಶನವನ್ನು ಹಸ್ತಾಂತರಿಸಿ, ಸ್ವಂತ ಸೂರಿನ ಕನಸು ಕಾಣುತ್ತಾ ಬಾಡಿಗೆ ಮನೆಗಳಿಗೆ ಹೋಗಿದ್ದರು. ಈ ಯೋಜನೆಯಡಿ 22 ಮನೆಗಳ ಕೆಲಸ ಆರಂಭವಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ 2 ವರ್ಷ ಸಮೀಪಿಸಿದರೂ ಯೋಜನೆ ಕಾರ್ಯರೂಪಕ್ಕೆ ಬರುವ ಸೂಚನೆಗಳು ಕಾಣಿಸದ ಕಾರಣ ಫಲಾನುಭವಿಗಳು ಹೈರಾಣಾಗಿದ್ದಾರೆ.

ADVERTISEMENT

22 ಮನೆಗಳ ಕಾಮಗಾರಿ ಅಪೂರ್ಣವಾಗಿದೆ. ಕೆಲವು ಮನೆಗಳ ಕಾಮಗಾರಿ ಆರ್‌ಸಿಸಿ ಹಂತದಲ್ಲಿದ್ದರೆ, ಇನ್ನು ಕೆಲವು ಮನೆಗಳಿಗೆ ಅಡಿಪಾಯ ನಿರ್ಮಿಸಿ, ಪಿಲ್ಲರ್‌ ಹಾಕಲಾಗಿದೆ. ಅತ್ತ ಮನೆಯ ಕನಸು ಸಾಕಾರಗೊಳ್ಳದೆ, ಇತ್ತ ಡಿಡಿ ತೆಗೆಯಲು ಸ್ವ-ಸಹಾಯ ಸಂಘಗಳಲ್ಲಿ ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟಿ ಸುಸ್ತಾಗಿದ್ದಾರೆ. ಕೆಲವರಿಗೆ ಬಾಡಿಗೆ ಪಾವತಿಸುವ ಹೊರೆಯೂ ಮೈಮೇಲೆ ಬಿದ್ದಿದೆ. ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆದಾರರು ಕಾರ್ಮಿಕರಿಗಾಗಿ ಪಟ್ಟಣದ ಸರಸ್ವತೀಪುರಂ ಬಡಾವಣೆಯ ನಾಗರಿಕ ಉದ್ಯಾನವನ್ನು ಹಾಳುಗೆಡವಿ ಅಲ್ಲಿ ಶೆಡ್ ನಿರ್ಮಿಸಿದ್ದರು. ಇಂದು ಆ  ಶೆಡ್‌ಗಳು ಖಾಲಿ ಬಿದ್ದಿವೆ. ಸಾಮಗ್ರಿಗಳು ಕಾಣೆಯಾಗಿವೆ. ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.

ಗುತ್ತಿಗೆಯ ಕರಾರಿನಂತೆ 1 ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಮನೆ ನಿರ್ಮಾಣ ಕಾಮಗಾರಿ, 2 ವರ್ಷ ಸಮೀಪಿಸುತ್ತಾ ಬಂದರೂ ಪೂರ್ಣಗೊಳ್ಳದಿರುವುದು ಫಲಾನುಭವಿಗಳಿಗೆ ಬೇಸರ ಮೂಡಿಸಿದೆ.

300 ಮನೆಗಳ ನಿರ್ಮಾಣದ ವಸತಿ ಯೋಜನೆ ಡಿಡಿ ತೆಗೆದವರು 40 ಮಂದಿ 2 ವರ್ಷ ಸಮೀಪಿಸಿದರೂ ಪೂರ್ಣಗೊಳ್ಳದ ಮನೆಗಳು

ರಾಜ್ಯ ಸರ್ಕಾರವು ವಸತಿ ನೀತಿಯನ್ನೇ ಬದಲಿಸಿ ಸಂಪೂರ್ಣ ವೆಚ್ಚ ಭರಿಸಿ ಈ ಮನೆಗಳನ್ನು ನಿರ್ಮಿಸಿ ಕೊಡುವ ಉದ್ದೇಶ ಹೊಂದಿದೆ. ಮನೆ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು

- ಕೆ.ಎಸ್.ಆನಂದ್ ಶಾಸಕ

ಮಾಸಿಕ ₹7ಸಾವಿರ ಬಾಡಿಗೆ ಪಾವತಿಸಿ ಬೇರೆಡೆ ವಾಸ ಮಾಡುತ್ತಿದ್ದೇವೆ. ಗುತ್ತಿಗೆದಾರರು ಒಮ್ಮೆಯೂ ಇತ್ತ ತಲೆ ಹಾಕಿಲ್ಲ. ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ

-ಮುಂಡ್ರೆ ಗೋವಿಂದಪ್ಪ ಫಲಾನುಭವಿ ಸರಸ್ವತೀಪುರಂ ಬಡಾವಣೆ

- ಬಿಲ್‌ ಪಾವತಿಯಾಗದ ಕಾರಣವನ್ನು ಗುತ್ತಿಗೆದಾರರು ಹೇಳುತ್ತಿದ್ದಾರೆ. ಬೀರೂರು ಮತ್ತು ಕಡೂರಿನಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಭರವಸೆ ಶಾಸಕರಿಂದ ಲಭಿಸಿದೆ

- ಭಂಡಾರಿ ಶ್ರೀನಿವಾಸ್ ಕಡೂರು ಪುರಸಭೆ ಅಧ್ಯಕ್ಷ

ಕೇಂದ್ರ ರಾಜ್ಯ ಸರ್ಕಾರದ ಅನುದಾನ ಬಾಕಿ ಇದೆ. ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಭರವಸೆ ಲಭಿಸಿದೆ

-ಯಶವಂತ್ ಕೊಳಚೆ ನಿರ್ಮೂಲನಾ ಮಂಡಳಿಯ ಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.