ಆಲ್ದೂರು: ಇಲ್ಲಿಗೆ ಸಮೀಪದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಸಿನ್‌ಖಾನ್‌ನ ರೈತ ಹಸ್ಮತ್ ಆಲಿ ಹಾಗೂ ರಹಿಮಾ ಬಾನು ದಂಪತಿಯ ಪುತ್ರಿ ಉಮೈಸಾರಾ ಕೃಷಿ ಪದವಿಯಲ್ಲಿ 16 ಚಿನ್ನದ ಪದಕ ಗಳಿಸಿದ್ದಾರೆ. ಈಚೆಗೆ ನಡೆದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ದಲ್ಲಿ ದಾಖಲೆಯ ಪದಕಗಳೊಂದಿಗೆ ಅವರು ಪದವಿ ಸ್ವೀಕರಿಸಿದರು.
ಉಮೈಸಾರ ಪ್ರಾಥಮಿಕ ಶಿಕ್ಷಣವನ್ನು ಗುಲ್ಲನ್ ಪೇಟೆಯ ಆರ್‌ಎಸ್ ಶಾಲೆ, ಮಾಚಗೊಂಡನಹಳ್ಳಿ ಜೆವಿಎಸ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಮೂಡಿಗೆರೆಯ ನಳಂದ ಶಾಲೆಯಲ್ಲಿ ಪಡೆದಿದ್ದಾರೆ. ಪಿಯು ವಿಜ್ಞಾನ ಶಿಕ್ಷಣವನ್ನು ಸೇಂಟ್ ಮಾರ್ಥಾಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಳಿಕ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿಗೆ ಸೀಟು ಪಡೆದಿದ್ದಾರೆ.
ಬಿಎಸ್ಪಿ ಕೃಷಿ ಪದವಿಯಲ್ಲಿ ವಿಶ್ವವಿದ್ಯಾಲಯದ 8 ಕಾಲೇಜುಗಳಲ್ಲಿ ಗರಿಷ್ಠ ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ನೊಂದಿಗೆ ಎಲ್ಲಾ ಪಠ್ಯ ವಿಷಯಗಳಲ್ಲಿ ಗರಿಷ್ಠ ಅಂಕಕ್ಕಾಗಿ 14 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಜತೆಗೆ ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಚಿನ್ನದ ಪದಕ ಸೇರಿ ಒಟ್ಟು 16 ಪದಕಗಳಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿನಿ ಉಮೈಸಾರಾ ಪತ್ರಿಕೆ ಜತೆ ಮಾತನಾಡಿ, ‘ಪ್ರತಿದಿನವೂ ಬೆಳಿಗ್ಗೆ 4 ಗಂಟೆಗೆ ಎದ್ದು ವಿದ್ಯಾಭ್ಯಾಸ ಮಾಡುತ್ತಿದ್ದೆ. ಆರಂಭದಲ್ಲಿ ಬೇರೆ ಜಿಲ್ಲೆಯ ವಾತಾವರಣಕ್ಕೆ ಹೊಂದಿ ಕೊಳ್ಳುವುದು ಕಷ್ಟವಾಯಿತು. ಪದವಿ ಯನ್ನು ಅರ್ಧಕ್ಕೆ ತ್ಯಜಿಸುವ ಚಿಂತನೆ ಯನ್ನೂ ಮಾಡಿದ್ದೆ. ಮನೆಯವರ ಪ್ರೋತ್ಸಾಹ, ಕಾಲೇಜಿನ ಪ್ರಾಧ್ಯಾಪಕರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಹೇಳಿದರು.
‘ಹೆಚ್ಚಿನ ಅಧ್ಯಯನಕ್ಕಾಗಿ ಇಟಲಿಯ ವಿಶ್ವವಿದ್ಯಾಲಯದಲ್ಲಿ ‘ಸಸ್ಟನಬಲ್ ಅಗ್ರಿಕಲ್ಚರಲ್’ ಕೋರ್ಸ್‌ಗೆ ಈಗಾಗಲೇ ಪ್ರವೇಶ ದೊರೆತಿದ್ದು, ವೀಸಾ ಪ್ರಕ್ರಿಯೆಗೆ ಕಾಯುತ್ತಿದ್ದೇನೆ. ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಪಿಎಚ್.ಡಿ ಮಾಡಿ, ರೈತರಿಗೆ ಸಹಾಯವಾಗುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇನೆ’ ಎಂದುಉಮೈಸಾರಾ ಹೇಳುತ್ತಾರೆ.
ಆರ್ಥಿಕ ನೆರವಿನ ನಿರೀಕ್ಷೆ
‘ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ₹ 20 ಲಕ್ಷ ಪ್ರೋತ್ಸಾಹಧನ ದೊರೆಯುತ್ತಿತ್ತು. ಕೋವಿಡ್ ನಂತರ ಪ್ರೋತ್ಸಾಹಧನ ನಿಲ್ಲಿಸಲಾಗಿದೆ. ಅದನ್ನು ಮತ್ತೆ ಆರಂಭಿಸಿದರೆ ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವೀಸಾ ಪ್ರಕ್ರಿಯೆಗೆ ಆರ್ಥಿಕ ನೆರವಿನ ಅವಶ್ಯಕತೆ ಇದ್ದು ಸರ್ಕಾರದಿಂದ ನೆರವನ್ನು ನಿರೀಕ್ಷಿಸುತ್ತಿದ್ದೇವೆ’ ಎನ್ನುತ್ತಾರೆ ಉಮೈಸಾರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.