ತರೀಕೆರೆ: ಯುವ ಸಮುದಾಯದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ವಕೀಲರೊಬ್ಬರು ತಮ್ಮ ತಂದೆಯ ಹೆಸರಿನಲ್ಲಿ ಹಳ್ಳಿಯಲ್ಲಿ ಗ್ರಂಥಾಲಯ ತೆರೆದು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುತ್ತಿದ್ದಾರೆ.
ತಾಲ್ಲೂಕಿನ ಗೋಪಾಲ ಕಾಲೊನಿ ಗ್ರಾಮದ ಬಿ.ವಿ.ದಿನೇಶ್‌ಕುಮಾರ್ ₹7 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ತೆರೆದಿದ್ದಾರೆ. ಗೋಪಾಲ ಕಾಲೋನಿಯು ಗೋಪಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಸುಮಾರು 3 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿ ಗ್ರಾಮ ಪಂಚಾಯಿತಿಯಿಂದ ತೆರೆದಿರುವ ಗ್ರಂಥಾಲಯವೂ ಇದೆ. ಊರಿನವರು ಅಲ್ಲಿಗೆ ಹೋಗುವುದು ಅನಾನುಕೂಲ ಆಗುತ್ತಿದ್ದು, ಆದ್ದರಿಂದ ಊರಿನಲ್ಲೇ ಗ್ರಂಥಾಲಯ ತೆರೆಯಬೇಕು ಎಂಬ ಆಸೆ ವೀರಭದ್ರಪ್ಪ ಅವರಿಗೆ ಇತ್ತು ಎಂದು ದಿನೇಶ್ ಹೇಳುತ್ತಾರೆ.
‘ಗ್ರಾಮ ಪಂಚಾಯಿತಿ ಹೊರತುಪಡಿಸಿ ಬೇರೆ ಊರಿನಲ್ಲಿ ಗ್ರಂಥಾಲಯವನ್ನು ಸರ್ಕಾರದಿಂದ ತೆರೆಯಲು ಅವಕಾಶ ಇಲ್ಲ ಎಂಬುದು ಗೊತ್ತಾಯಿತು. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಗ್ರಂಥಾಲಯಕ್ಕೆ ನಿವೇಶನ ನೀಡುತ್ತೇವೆ. ಆದರೆ, ಕಟ್ಟಡವನ್ನು ಯಾರಾದರೂ ದಾನಿಗಳು ಕಟ್ಟಿಕೊಡಬೇಕೆಂದು ಸಲಹೆ ನೀಡಿದರು. ನಮ್ಮ ತಂದೆಯವರ ಹೆಸರಿನಲ್ಲೇ ಗ್ರಂಥಾಲಯದ ಕಟ್ಟಡ ನಿರ್ಮಿಸಲು ನಿರ್ಧರಿಸಿದೆ’ ಎಂದು ಅವರು ವಿವರಿಸಿದರು.
ಬಿ.ಎಸ್ಸಿ ಪದವೀಧರರಗಿದ್ದ ತಂದೆ ಭಾಗಸಾಲೆ ಬಿ. ವೀರಭದ್ರಪ್ಪ ಪುಸ್ತಕ ಪ್ರೇಮಿಯಾಗಿದ್ದರು. ಕಥೆ-ಕಾದಂಬರಿ, ಕುವೆಂಪು, ಶಿವರಾಮ ಕಾರಂತ, ಬೇಂದ್ರೆ ಸೇರಿ ಹಲವರ ಪುಸ್ತಕಗಳನ್ನು ಓದುತ್ತಿದ್ದರು. ‘ಪ್ರಜಾವಾಣಿ’, ‘ಸುಧಾ’ ಸೇರಿ ಹಲವು ಪತ್ರಿಕೆ ತರಿಸಿ ಓದಿಸುತ್ತಿದ್ದರು. ಚಂದಮಾಮ, ಬಾಲಮಿತ್ರ, ದಿನಕ್ಕೊಂದು ಕಥೆ ಪುಸ್ತಕಗಳನ್ನು ಮಕ್ಕಳಿಗಾಗಿಯೂ ಸಹ ತರುತ್ತಿದ್ದರು ಎಂದು ದಿನೇಶ್ ಹೇಳಿದರು.
ತಂದೆ ವೀರಭದ್ರಪ್ಪ ಅವರು ಹೊಸನಗರ ತಾಲ್ಲೂಕಿನ ಭಾಗಸಾಲೆ ಗ್ರಾಮದವರು. ಮಡೆನೂರು ಅಥವಾ ಹರೆಭಾಸ್ಕರ ಜಲಾಶಯ ನಿರ್ಮಾಣ ಮಾಡಿದಾಗ ಭಾಗಸಾಲೆ ಊರು ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲಿಂದ ಅವರು ಸಹೋದರ– ಸಹೋದರಿಯರೊಂದಿಗೆ ಸಾಗರ ತಾಲ್ಲೂಕಿನ ಬ್ರಾಹ್ಮಣ ಮಳ್ಳ ಗ್ರಾಮದಲ್ಲಿ ನೆಲೆಸಿದರು. ಕೆಲ ವರ್ಷಗಳ ನಂತರ ಲಿಂಗನಮಕ್ಕಿ ಅಣೆಕಟ್ಟು ಕಟ್ಟುವಾಗ ಮತ್ತೆ ಜಲಾಶಯದ ಹಿನ್ನಿರಿಗೆ ಬ್ರಾಹ್ಮಣ ಮಳ್ಳ ಊರು ಸಹ ಮುಳುಗಡೆ ಆಯಿತು. ಆಗ ಅವರು ತರೀಕೆರೆ ತಾಲ್ಲೂಕಿನ ಗೋಪಾಲ ಕಾಲೋನಿಯಲ್ಲಿ ಸರ್ಕಾರ ನೀಡಿದ ಜಮೀನಿನಲ್ಲಿ ಬಂದು ನೆಲಸಿದರು ಎಂದು ವಿವರಿಸಿದರು.
ಅವರು ಪುಸ್ತಕ ಪ್ರೇಮಿಗಳಿದ್ದರಿಂದ ಅವರ ಹೆಸರಿನಲ್ಲೇ ಗ್ರಂಥಾಲಯ ನಿರ್ಮಿಸಲಾಗಿದೆ. ಚಿಂತಕಿ ಎಚ್.ಎಸ್. ಅನುಪಮಾ ಸೇರಿ ಹಲವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪುಸ್ತಕ ಕೊಡುಗೆ ನೀಡುವವರು ದೂರವಾಣಿ ಸಂಖ್ಯೆ 94496 87276 ಸಂಪರ್ಕಿಸಬಹುದು ಎಂದು ಅವರು ಹೇಳಿದರು.
‘ಮಕ್ಕಳು ಮತ್ತು ಹಿರಿಯರು ಸೇರಿ ಎಲ್ಲರೂ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮೊಬೈಲ್ ದೂರವಾಣಿ ಬಿಟ್ಟು ಪುಸ್ತಕ ಹಿಡಿಯುವಂತೆ ಮಾಡುವುದು ಇದರ ಉದ್ದೇಶ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.