ಬಾಳೆಹೊನ್ನೂರು: ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಅತಿ ಶ್ರೇಷ್ಠ ಸ್ಥಾನಮಾನವನ್ನು ನೀಡಲಾಗಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ರೇಣುಕಾನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಬೈರವಿ ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ದೇಶದ ಏಳಿಗೆಗೆ ಮಹಿಳೆಯರ ಪಾತ್ರ ಬಹಳ ಪ್ರಮುಖವಾದುದು. ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘವು ನಿಂತ ನೀರಾಗಬಾರದು ಹರಿಯುವ ನೀರಾಗಿ, ಸದಾ ಚಟುವಟಿಕೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದರು.
ಪಲ್ಲವಿ ಸಿ.ಟಿ.ರವಿ ಮಾತನಾಡಿ, ‘ಒಕ್ಕಲುತನದ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಯ ಒತ್ತಡದ ನಡುವೆಯೂ ಸಮಾಜಮುಖಿ ಸೇವೆಯನ್ನು ಮಾಡುವ ಮನೋಭಾವ ಬೆಳೆಸಿಕೊಂಡಾಗ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.
ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ‘ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಒಕ್ಕಲಿಗ ಮಹಿಳೆಯರು ಒಗ್ಗೂಡಿ ಸಂಘವನ್ನು ಕಟ್ಟಿ ಬೆಳೆಸಿ ಸಂಘಟಿತರಾದಲ್ಲಿ ಅಭಿವೃದ್ಧಿ ಸಾಧ್ಯ’ ಎಂದರು.
ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ ಮಾತನಾಡಿ, ‘ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುವ ಉದ್ದೇಶ ಹೊಂದಿದೆ. ಪರಸ್ಪರ ಹೊಂದಾಣಿಕೆ ಹಾಗೂ ಆತ್ಮವಿಶ್ವಾಸದಿಂದ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.
ಭೈರವಿ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಸಿ.ಟಿ.ರೇವತಿ ಧರ್ಮರಾಜ್, ಉಪಾಧ್ಯಕ್ಷರಾಗಿ ಸಾಂಚಿತಾ ಸಂದೇಶ್, ಪ್ರೀತಿ ಉಮೇಶ್ (ಕಾರ್ಯದರ್ಶಿ), ಜ್ಯೋತಿ ಜಗದೀಶ್ (ಖಜಾಂಚಿ) ಹಾಗೂ ಹಿಮಾಮಳಿ, ಕವಿತಾ, ಪ್ರಶಾಂತಿ, ಆಶಾ, ಸುಚೇತಾ, ರೇಖಾ, ಮಧುರಾ, ಕರುಣಾ, ಸುಚೀತ, ಸುಪ್ರಿಯಾ, ಮೈತ್ರಿ, ಸಹನಾ, ಮಾಲಾ, ಶಮಂತ ನಿರ್ಧೇಶಕರಾಗಿ ಅಧಿಕಾರ ಸ್ವೀಕರಿಸಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್.ರುದ್ರಪ್ಪಗೌಡ, ಪ್ರಶಾಂತಿ, ಆಶಾ, ಸಚೇತಾ, ಕವಿತಾ, ಸಾಂಚಿತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.