ಬಾಳೆಹೊನ್ನೂರು: ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ 15ನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಹೊರನಾಡಿನ ರಾಜಗೋಪಾಲ ಜೋಷಿ ಗುರುವಾರ ಚಾಲನೆ ನೀಡಿದರು.
‘ಆಡಂಬರಕ್ಕೆ ಒತ್ತು ನೀಡದೆ ಭಕ್ತಿಪೂರ್ವಕವಾಗಿ ಮಾಡುವ ಕೆಲಸಗಳು ಭಗವಂತನ ಮೆಚ್ಚುಗೆ ಪಾತ್ರವಾಗಲಿವೆ. ದುರ್ಗೆಯ ಆರಾಧನೆಯಿಂದ ಮನುಕುಲದ ಸಂಕಷ್ಟಗಳು ದೂರವಾಗಲಿದೆ. ಸತ್ವ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಭಗವಂತನ ಅನುಗ್ರಹ ದೊರೆಯಲಿದೆ. ಜೀವನದಲ್ಲಿ ಆನಂದ, ಧನ್ಯತೆ ಪಡೆಯಲು ದೈವ ಸಾನ್ನಿಧ್ಯ ಅಗತ್ಯವಾಗಿ ಇರಬೇಕಿದೆ’ ಎಂದರು.
ದುರ್ಗಾ ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ‘ಈ ಬಾರಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು’ ಎಂದರು.
ಮಾರ್ಕಾಂಡೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ದುರ್ಗಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಪ್ರಸನ್ನ ಜಿ.ಭಟ್, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಉಪೇಂದ್ರ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ನಾರಾಯಣ ಶೆಟ್ಟಿ, ಕೆ.ಪ್ರಶಾಂತ್‍ಕುಮಾರ್, ಮಂಜು ಹೊಳೆಬಾಗಿಲು ಮತ್ತಿತರರು ಭಾಗವಹಿಸಿದ್ದರು.
ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪುರೋಹಿತರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಅ.4ರ ಶುಕ್ರವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನದವರೆಗೆ ವೃಷಭವಾಹಿನಿ, ಮಾಹೇಶ್ವರಿ ಪೂಜಾ ಪಾರಾಯಣ, ಸಂಜೆ 6ರಿಂದ ಭಕ್ತರಿಂದ ಪೂಜಾ ಸೇವೆ ಮಂಗಳಾರತಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ತುಳು ಹಾಸ್ಯ ಯಕ್ಷಗಾನ ಕಲಾವಿದರ ಸಂಗಮದಲ್ಲಿ ಯಕ್ಷ-ಹಾಸ್ಯ ವೈಭವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.