ಬಾಳೆಹೊನ್ನೂರು: ಸಮುದಾಯದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾದಲ್ಲಿ ಅವರಿಗೆ ಸಹಕರಿಸುವ ಒಳ್ಳೆಯ ಮನಸ್ಸು ಹೊಂದಿರಬೇಕು. ಮನಸ್ಸು ಒಳ್ಳೆಯದಿದ್ದರೆ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಒಕ್ಕಲಿಗ ಸಮುದಾಯದ ಮಹಿಳೆಯರು ಶೈಕ್ಷಣಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಾ ಸುರೇಂದ್ರ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಭೈರವಿ ಒಕ್ಕಲಿಗರ ಮಹಿಳಾ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಶ್ರೇಷ್ಠ ಸಂಪತ್ತನ್ನು ಉಳಿಸಲು ಮಹಿಳೆಯರು ಒಗ್ಗೂಡಬೇಕಿದೆ. ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕಿದೆ. ಮಹಿಳೆಯರಿಗೆ ಸರ್ಕಾರದಿಂದ ಮೀಸಲಾತಿ ದೊರಕಿದಾಗ ಅದನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸಾಧನೆ ಮಾಡಬೇಕು. ಸಮಾಜದಲ್ಲಿ ಕಾಲೆಳೆಯುವವರು, ನೋವು ನೀಡುವವರು ಹಲವರು ಇರುತ್ತಾರೆ. ಅವುಗಳ ಬಗ್ಗೆ ಯೋಚಿಸದೆ ಮಹಿಳೆಯರು ಕ್ರಿಯಾತ್ಮಕವಾಗಿ ಯೋಚಿಸಬೇಕು ಎಂದರು.
ವೇದಿಕೆ ಅಧ್ಯಕ್ಷೆ ಸಿ.ಟಿ.ರೇವತಿ ಧರ್ಮಪಾಲ್ ಮಾತನಾಡಿ, ಒಂದು ವರ್ಷದ ಹಿಂದೆ ಆರಂಭಗೊಂಡ ಮಹಿಳಾ ವೇದಿಕೆ ಒಕ್ಕಲಿಗರ ಮಹಿಳೆಯರಿಗೆ ವೇದಿಕೆ ಒದಗಿಸಿಕೊಡುತ್ತಿದೆ. ವೇದಿಕೆ ಮೂಲಕ ಹಲವು ಕಾರ್ಯಗಳನ್ನು ಮಾಡಲಾಗಿದೆ. ಮಹಿಳೆಯರನ್ನು ಸಮಾಜದ ಮುಂಚೂಣಿಗೆ ತರುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ ಎಂದರು.
ನರ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದು ಸಾಧನೆ ಮಾಡಿದ ಶಕುಂತಲಾ ವೀರೇಗೌಡ, ಸ್ವಾವಲಂಬಿ ಜೀವನ ನಡೆಸುತ್ತಿರುವ ಎಚ್.ಪಿ.ಶಾರದಾ ಅವರನ್ನು ಸನ್ಮಾನಿಸಲಾಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್.ಮರಿಗೌಡ, ಭೈರವಿ ಒಕ್ಕಲಿಗರ ಸಂಘದ ಉಪಾಧ್ಯಕ್ಷೆ ಸಾಂಚಿತಾ, ಕಾರ್ಯದರ್ಶಿ ಪ್ರೀತಿ, ಖಜಾಂಚಿ ಜ್ಯೋತಿ, ಸುಷ್ಮಾ, ಸಹನಾ, ಸುಚೇತಾ, ಪ್ರಶಾಂತಿ, ಗಾಯತ್ರಿ, ರೇಖಾ, ಆಶಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.