ADVERTISEMENT

ಬಾಳೆಹೊನ್ನೂರು | ಅಡಿಕೆಗೆ ಕೊಳೆ ರೋಗ: ಪರಿಹಾರ ಮರೀಚಿಕೆ

ಅತಿವೃಷ್ಟಿಯಿಂದ ಅಡಿಕೆ, ಕಾಫಿ, ಕಾಳುಮೆಣಸು ಫಸಲು ಕಳೆದುಕೊಂಡ ರೈತರು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 5:40 IST
Last Updated 22 ನವೆಂಬರ್ 2024, 5:40 IST
<div class="paragraphs"><p>ಕೊಳೆ ರೋಗದಿಂದ ಬಲಿಯುವ ಮುನ್ನವೇ ಉದುರಿರುವ ಅಡಿಕೆ </p></div>

ಕೊಳೆ ರೋಗದಿಂದ ಬಲಿಯುವ ಮುನ್ನವೇ ಉದುರಿರುವ ಅಡಿಕೆ

   

ಬಾಳೆಹೊನ್ನೂರು: ಅತಿವೃಷ್ಟಿಯಿಂದಾಗಿ ಮಲೆನಾಡು ಭಾಗದಲ್ಲಿ ಅಡಿಕೆ, ಕಾಳುಮೆಣಸು, ಕಾಫಿ ಸೇರಿ ಪ್ರಮುಖ ಬೆಳೆಗಳ ಶೇ 40ರಷ್ಟು ಫಸಲು ಹಾನಿ ಆಗಿದ್ದರೂ, ಇದುವರೆಗೆ ಬೆಳೆಹಾನಿ ಪರಿಹಾರ ಲಭಿಸದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಕಳಸ, ಮೂಡಿಗೆರೆ ತಾಲ್ಲೂಕಿನ ಬಹುತೇಕ ಕಡೆ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತಲೂ ಮೂರು ಪಟ್ಟು ಹೆಚ್ಚಿನ ಮಳೆ ಸುರಿದಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಬೋರ್ಡೊ ದ್ರಾವಣ ಸಿಂಪಡಿಸಲು ಆಗದೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಕೊಪ್ಪ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯುವ 9973 ಹೆಕ್ಟೇರ್‌ ಪ್ರದೇಶದಲ್ಲಿ  8150 ಹೆಕ್ಟೇರ್‌ ಪ್ರದೇಶದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ನರಸಿಂಹರಾಜಪುರ ತಾಲ್ಲೂಕಿನ 6205 ಹೆಕ್ಟೇರ್‌ನಲ್ಲಿ , ಶೃಂಗೇರಿ ತಾಲ್ಲೂಕಿನ 2970 ಹೆಕ್ಟೇರ್‌ನಲ್ಲಿ,  ಕಳಸ ತಾಲ್ಲೂಕಿನ 4875 ಹೆಕ್ಟೇರ್‌ನಲ್ಲಿ, ಮೂಡಿಗೆರೆ ತಾಲ್ಲೂಕಿನ 2774 ಹೆಕ್ಟೇರ್‌ ಪ್ರದೇಶದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ.

ADVERTISEMENT

ಕೊಳೆರೋಗದ ಜತೆಗೆ ಎಲೆಚುಕ್ಕಿ ರೋಗ ಭಾದೆಯೂ ಈ ಪ್ರದೇಶಗಳಲ್ಲಿ ಉಲ್ಭಣಗೊಂಡಿದೆ. ಅತಿವೃಷ್ಟಿಯಿಂದ ಕೆಲವು ತೋಟಗಳಲ್ಲಿ ಹೆಗ್ಗೊಳೆ ಕಾಣಿಸಿಕೊಂಡಿದ್ದು ಸದೃಢ ಮರಗಳು ಸತ್ತುಹೋಗಿದೆ. ಕಾಳುಮೆಣಸು ಬೆಳ್ಳಿಗಳಲ್ಲಿ ಕಾಳು ಕಟ್ಟದೆ ಬಳ್ಳಿಗಳು ಕೊಳೆತುಹೋಗಿವೆ.

ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಅಡಿಕೆ, ಕಾಳುಮೆಣಸು ಫಸಲು ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದರೂ ಶಾಸಕ ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ ಇದೂವರೆಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹವಾಮಾನ ಆಧಾರಿತ ವಿಮಾ ಯೋಜನೆಗೆ ರೈತರು ಅಡಿಕೆ, ಕಾಳುಮೆಣಸಿಗೆ 2023-24ನೇ ಸಾಲಿನ ವಿಮಾ ಕಂತು ಪಾವತಿಸಿದ್ದಾರೆ. ವಿಮೆ ಪರಿಹಾರ ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ. ಪಕ್ಕದ ಉಡುಪಿ, ಶಿವಮೊಗ್ಗ, ಮಂಗಳೂರಿನಲ್ಲಿ ಕೆಲವು ರೈತರ ಖಾತೆಗಳಿಗೆ ಈಗಾಗಲೇ ವಿಮಾ ಪರಿಹಾರ ಜಮಾ ಆಗಿದೆ. ಫಸಲು ಕಳೆದುಕೊಂಡ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ವಿತರಿಸಬೇಕು’ ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಆಗ್ರಹಿಸಿದರು.

ಸರ್ಕಾರಕ್ಕೆ ವರದಿ ಸಲ್ಲಿಕೆ

‘ಬೆಳೆ ಹಾನಿ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. 8 ಸಾವಿರ ಹೆಕ್ಟೇರ್‌ನಲ್ಲಿ ಕಾಳುಮೆಣಸು ಫಸಲು ನಷ್ಟವಾಗಿದೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಜಿಲ್ಲೆಯ ಯಾವುದೇ ತಾಲ್ಲೂಕುಗಳು ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಘೋಷಣೆಯಾಗದ ಕಾರಣ ಪರಿಹಾರ ದೊರಕುವುದು ಕಷ್ಟ ಎಂದು ತೋಟಗಾರಿಕೆ ಇಲಾಖೆಯ ಜಿಲ್ಲಾ ನಿರ್ದೇಶಿ ಪೂರ್ಣಿಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.