ಆಲ್ದೂರು: ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನೂರು ಗ್ರಾಮದ ಕೂಲಿ ಕಾರ್ಮಿಕರ ಸ್ವಂತ ಸೂರಿನ ಕನಸು ಕನಸಾಗಿಯೇ ಉಳಿದಿದೆ. ಸರ್ವೆ ನಂಬರ್ 90, ಎಂಆರ್ ನಂಬರ್ 24ರಲ್ಲಿ ನಿವೇಶನ ರಹಿತರಿಗಾಗಿ 2 ಎಕರೆ ಜಮೀನು ಮುಂಜೂರುಗೊಳಿಸಲಾಗಿದೆ. ಆದರೆ, ಲೇಔಟ್ ನಿರ್ಮಿಸಲು ಮತ್ತು ಅರ್ಹ ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಫಲಾನುಭವಿಗಳು ಪರದಾಡುವಂತಾಗಿದೆ.
‘ಬನ್ನೂರಿನಲ್ಲಿರುವ ಕೂಲಿ ಕಾರ್ಮಿಕರು ಸ್ವಂತ ಸೂರಿನ ಕನಸು ಕಾಣುತ್ತಾ ಎರಡು, ಮೂರು ದಶಕಗಳಿಂದ ಎಸ್ಟೇಟ್‌ಗಳಲ್ಲಿ ವಾಸವಿದ್ದಾರೆ. ಸ್ವಂತ ನಿವೇಶನ ಇಲ್ಲದ ಕಾರಣ ಇವರಿಗೆ ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ‘ಸಂಘಟನೆಗಳ ಹೋರಾಟದ ಫಲವಾಗಿ ಜಮೀನಿನ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಲಾಗಿದೆ. ಇನ್ನು ಲೇಔಟ್ ನಿರ್ಮಾಣ ಮಾಡಿ, ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿದರೆ ನಿವೇಶನಕ್ಕಾಗಿ ಕಾದು ಕುಳಿತಿರುವ ಬಡ ಕುಟುಂಬಗಳಿಗೆ ನ್ಯಾಯ ದೊರಕಿದಂತಾಗುತ್ತದೆ’ ಎಂದು ಬನ್ನೂರು ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಕೆ.ಡಿ ಹೇಳಿದರು.
‘ಶಾಸಕರು, ಅಧಿಕಾರಿಗಳು ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ನಿವೇಶನ ರಹಿತರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಏಜೆಂಟ್ ರವಿ, ಕಾರ್ಯದರ್ಶಿ ರೋಷನ್, ಎಸ್. ವಿಜಯಕುಮಾರ್, ಉಮೇಶ್, ಮಹೇಶ್, ವಸಂತ್ ಹೇಳಿದರು. ‘ನಿವೇಶನ ರಹಿತರ ಹೋರಾಟಕ್ಕೆ ಮುಂದೆಯೂ ಸಂಘಟನೆಯಿಂದ ಪೂರ್ಣ ಬೆಂಬಲ ನೀಡಲಾಗುವುದು’ ಎಂದು ಅಂಬೇಡ್ಕರ್ ಹೋರಾಟ ವೇದಿಕೆಯ ಅಧ್ಯಕ್ಷ ನವರಾಜು ಎಚ್. ಹೇಳಿದರು.
‘ಬನ್ನೂರು ನಿವೇಶನ ರಹಿತರಂತೆ ಹಚ್ಚಡ ಮನೆ, ಚಿತ್ತುವಳ್ಳಿ, ಬೆಳಗೋಡು ಮುಂತಾದ ಭಾಗಗಳಲ್ಲಿಯೂ ಹೋರಾಟ ನಡೆಯುತ್ತಿದ್ದು, ಕೆಲವರು ಅರ್ಹ ಫಲಾನುಭವಿಗಳಿಗೆ ನಿವೇಶನ ದೊರೆಯದಂತೆ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದು, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಬನ್ನೂರು ನಿವೇಶನ ರಹಿತ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಿ, ನಿವೇಶನ ಹಂಚಬೇಕು’ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಹೆಡದಾಳು ಕುಮಾರ್ ಹೇಳಿದರು.
ಪಂಚಾಯಿತಿಗೆ ಆದಾಯದ ಮೂಲ ಇಲ್ಲವಾದ್ದರಿಂದ ಲೇಔಟ್ ನಿರ್ಮಾಣ ಕಾರ್ಯ ವಿಳಂಬವಾಗಿದೆ. 15ನೇ ಹಣಕಾಸಿನ ಅನುದಾನವನ್ನು ಲೇಔಟ್ ನಿರ್ಮಾಣಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ. ಹೆಚ್ಚುವರಿ ಅನುದಾನಕ್ಕೆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಲಾಗುವುದು’ ಎಂದು ದೊಡ್ಡಮಾಗರವಳ್ಳಿ ಪಂಚಾಯಿತಿ ಅಧ್ಯಕ್ಷೆ ಮೇಘ್ನ ಕೃಷ್ಣೆಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.