ADVERTISEMENT

ಈ ಬಾರಿ ಭೋಜೇಗೌಡ ‘ಮ್ಯಾಜಿಕ್’ ನಡೆಯಲ್ಲ: ರಮೇಶ್ ಶೆಟ್ಟಿ

ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:27 IST
Last Updated 25 ಮೇ 2024, 16:27 IST
ಎಂ. ರಮೇಶ್‌ ಶೆಟ್ಟಿ
ಎಂ. ರಮೇಶ್‌ ಶೆಟ್ಟಿ   

ಚಿಕ್ಕಮಗಳೂರು: ‘ಅಧಿಕಾರದ ಅವಧಿಯಲ್ಲಿ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಎಸ್.ಎಲ್‌.ಭೋಜೇಗೌಡ ಅವರನ್ನು ಈ ಬಾರಿ ನೈರುತ್ಯ ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರು ತಿರಸ್ಕಾರ ಮಾಡಲಿದ್ದಾರೆ. ಆಸೆ, ಆಮಿಷಗಳನ್ನು ನೀಡಿ ಮತ ಪಡೆಯುತ್ತಿದ್ದ ಅವರ ಮ್ಯಾಜಿಕ್ ಈ ಬಾರಿ ನಡೆಯಲ್ಲ’ ಎಂದು ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಹೇಳಿದರು.

‘ನೈರುತ್ಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿ ಆಯ್ಕೆಯಾಗಿ 6 ವರ್ಷ ಅಧಿಕಾರ ಅನುಭವಿಸಿದ ಅವರು ಶಿಕ್ಷಕ ವರ್ಗಕ್ಕೆ ನೀಡಿದ ಕೊಡುಗೆ ಶೂನ್ಯ. ಯಾವುದೇ ಭರವಸೆಗಳನ್ನು ಈಡೇರಿಸದೆ ಕಾಲಹರಣ ಮಾಡಿದ್ದಾರೆ. ಈ ಬಾರಿ ಶಿಕ್ಷಕರು ಅವರ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕ ಅಭ್ಯರ್ಥಿಗೆ ಮತ ನೀಡುವ ಮೂಲಕ ಸೋಲಿನ ರುಚಿ ತೋರಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಕಾರಣರಾಗಿದ್ದರು. ಈಗ ಅದೇ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅವರನ್ನು ಸೋಲಿಸಲು ಬಿಜೆಪಿ ಮುಖಂಡರೇ ತಂತ್ರ ರೂಪಿಸಿದ್ದು, ಸೋಲು ನಿಶ್ಚಿತ. ಕಾಂಗ್ರೆಸ್ ಪಕ್ಷದಿಂದ ಪದವೀಧರ ಕ್ಷೇತ್ರಕ್ಕೆ ಅನುಭವಿಗಳಾದ ಆಯನೂರು ಮಂಜುನಾಥ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಕೆ.ಕೆ.ಮಂಜುನಾಥ ಕುಮಾರ್ ಸ್ಪರ್ಧಿಸಿದ್ದು, ಗೆಲುವು ಸಾಧಿಸಲಿದ್ದಾರೆ ಎಂದರು.

ADVERTISEMENT

ಗ್ಯಾರಂಟಿ ಯೋಜನೆಗಳು ಮೂಲಕ ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಇದು ಪಕ್ಷದ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಗೆಲುವು ತಂದು ಕೊಡಲಿದೆ. ನೀಡಿದ ಭರವಸೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೆ ಕ್ರಮ ವಹಿಸಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಾಂತವೀರನಾಯ್ಕ್, ಮುಖಂಡ ಫಣಿರಾಜ್ ಜೈನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.