ಚಿಕ್ಕಮಗಳೂರು: ದಾರಿಯಿಲ್ಲದ ಊರು, ಬೇಡವೆಂದರೂ ಬಂದು ನಿಲ್ಲುವ ಕಾಡಾನೆ–ಕಾಡುಕೋಣಗಳು. ಬೇಕೆಂದರೂ ಆಗದ ಮದುವೆ, ಕಾಡಿನಿಂದ ಹೊರತನ್ನಿ ಎಂದರೂ ಕಿವಿಗೊಡದ ಸರ್ಕಾರ. ಪಶ್ಚಿಮಘಟ್ಟದ ಅರಣ್ಯದಲ್ಲೇ ಉಳಿದ 10 ಕುಟುಂಬ..!
ಇದು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಪಶ್ಚಿಮಘಟ್ಟದ ಕಡೆಗೆ ಸಾಗಿದರೆ ದಕ್ಷಿಣ ಕನ್ನಡ ಜಿಲ್ಲೆಯ ಅಂಚಿನಲ್ಲಿ ಕಾಡಿನ ನಡುವೆ ಉಳಿದ ಬಿದರತಳ ಎಂಬ ಪುಟ್ಟ ಗ್ರಾಮದ ಜನರ ಗೋಳಿನ ಕಥೆ.
ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟಿಯಲ್ಲಿ 8 ಕಿಲೋ ಮೀಟರ್ ಇಳಿದು ಸಾಗಿದರೆ ಬಲಕ್ಕೆ ಕಡಿದಾದ ಮುಗಿಲೆತ್ತರದ ಗುಡ್ಡಗಳ ಎದುರಾಗುತ್ತವೆ. ಆ ಗುಡ್ಡಗಳನ್ನು ಏರಿ ನಾಲ್ಕು ಕಿಲೋ ಮೀಟರ್ ನಡೆದು ಸಾಗಿದರೆ ಬಿದರತಳ ಎಂಬ ಪುಟ್ಟ ಜನವಸತಿ ಎದುರಾಗುತ್ತದೆ. ಆದರೆ, ಈ ಊರಿಗೆ ಹೋಗಲು ದಾರಿಯೇ ಇಲ್ಲ.
ಹಿಂದೆ ಇದ್ದ ದಾರಿ ಸಂಪೂರ್ಣವಾಗಿ ಗುಡ್ಡದೊಂದಿಗೆ ಬೆರೆತು ಹೋಗಿದೆ. ಮನೆ ಸೇರುವ ತನಕವೂ ಕಡಿದಾದ ಗುಡ್ಡ ಏರಬೇಕು, ಮಳೆಗಾಲದಲ್ಲಿ ಮನೆ ಸೇರುವುದೇ ಈ ಜನರಿಗೆ ಸಾಹಸದ ಕೆಲಸ. ಚಿಕ್ಕಮಗಳೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಈ ಗ್ರಾಮವಿದೆ.
ಮನೆಗಳ ಮುಂದೊಂದು ನೀರು ಹರಿಯುವ ಕೊಳ್ಳವಿದೆ. ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುವ ನೀರು ದಾಟಿ ಬರುವುದೇ ಅಸಾಧ್ಯ. ಆದ್ದರಿಂದ ಮಳೆಗಾಲದಲ್ಲಿ ಸಂಪರ್ಕವನ್ನೇ ಈ ಗ್ರಾಮ ಕಳೆದುಕೊಳ್ಳುತ್ತದೆ.
ಇರುವ ಜಮೀನಿನಲ್ಲಿ ಬೆಳೆ ಬೆಳೆಯುವುದನ್ನು ನಿಲ್ಲಿಸಿಯೇ ಹಲವು ವರ್ಷಗಳು ಕಳೆದಿವೆ. ಬೆಳೆ ಬೆಳೆದರೂ ಕಾಡು ಪ್ರಾಣಿಗಳು ಉಳಿಸುವುದಿಲ್ಲ. ವಿದ್ಯುತ್ ಸಂಪರ್ಕ ಇಲ್ಲ, ಮೊಬೈಲ್ ದೂರವಾಣಿ ನೆಟ್‌ವರ್ಕ್ ಇಲ್ಲ. ನಾಡಿಗೆ ಬಂದು ಕೂಲಿ ಮಾಡಿಕೊಂಡು ಮತ್ತೆ ಕಾಡಿಗೆ ಹೋಗಿ ಕುಟುಂಬ ಸೇರಬೇಕಾದ ಸ್ಥಿತಿ ಇದೆ.
‘ಇನ್ನು ಇಲ್ಲಿರುವ ಹತ್ತು ಮನೆಗಳಲ್ಲಿ ಒಂಬತ್ತು ಯುವಕರಿದ್ದು, ಎಲ್ಲರಿಗೂ ಮದುವೆ ವಯಸ್ಸು ಮೀರಿದೆ. ಕೆಲವರಿಗೆ 45 ವರ್ಷ ದಾಟಿದೆ. ಕಾಡಿನ ನಡುವೆ ಇರುವ ಈ ಊರಿಗೆ ಮದುವೆಯಾಗಿ ಬರಲು ಯಾವ ಯುವತಿಯರೂ ಒಪ್ಪುವುದಿಲ್ಲ. ಯಾವ ರಸ್ತೆಯಲ್ಲಿ ಅವರನ್ನು ಮನೆಗೆ ಕರೆತರುವುದು’ ಎಂದು ಗ್ರಾಮದ ಸತೀಶ್ ಪ್ರಶ್ನಿಸುತ್ತಾರೆ.
‘ಎಲ್ಲಾದರೂ ಕೂಲಿ ಮಾಡಿ ಜೀವನ ಸಾಗಿಸೋಣ ಎಂದು ಊರುಬಿಟ್ಟು ಹೋಗಿದ್ದೆ. ವಯಸ್ಸಾದ ತಾಯಿ ಒಬ್ಬರೇ ಮನೆಯಲ್ಲಿದ್ದರು. ಅವರಿಗಾಗಿ ಮತ್ತೆ ವಾಪಸ್ ಬಂದಿದ್ದೇನೆ. ಹಗಲು –ರಾತ್ರಿ ಎನ್ನದೆ ಮನೆ ಮುಂದೆ ಬಂದು ನಿಲ್ಲುವ ಕಾಡು ಪ್ರಾಣಿಗಳು, ಮನೆಗೆ ಬರಲು ದಾರಿಯೇ ಇಲ್ಲದ ಊರಿನಿಂದ ಮದುವೆಯ ಆಸೆ ಕಮರಿ ಹೋಗಿದೆ. ಜೀವನದಲ್ಲಿ ಯಾವ ಉತ್ಸಾಹವೂ ಉಳಿದಿಲ್ಲ’ ಎಂದು ಯುವಕ ಗಿರೀಶ್ ಬೇಸರ ವ್ಯಕ್ತಪಡಿಸುತ್ತಾರೆ.
‘ಇಷ್ಟು ಪ್ರಯಾಸದ ನಡುವಿನ ಬದುಕಿನಿಂದ ಹೊರ ಬರಲು ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರಯತ್ನಿಸಿದ್ದಾರೆ. ಆದರೆ, ಬದಲಿ ಜಮೀನು ನೀಡಿ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿಲ್ಲ. ಜನರನ್ನು ಕಾಡಿನಲ್ಲೇ ಉಳಿಸಿ ನಮ್ಮದು ನಾಗರಿಕ ಸಮಾಜ ಎಂದು ಹೇಳುವುದು ಹೇಗೆ’ ಎಂದು ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತ ಸಂಜಯ್ ಪ್ರಶ್ನಿಸುತ್ತಾರೆ.
ಸುತ್ತಲೂ ಅರಣ್ಯ ಭೂಮಿ ಇದೆ. ನಡುವೆ ಇರುವ ಇವರ ಹಿಡುವಳಿ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಬೇರೆಡೆ ಇವರಿಗೆ ಜಮೀನು ನೀಡಬೇಕು. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪೇಟೆಗೆ ಹೋದವರು ಮರಳಿ ಬರಲಿಲ್ಲ
ಕೊಟ್ಟಿಗೆಹಾರಕ್ಕೆ ಹೋಗಿ ಬರುವುದಾಗಿ ಹೇಳಿ ಬಿದರತಳ ಗ್ರಾಮದಿಂದ ಹೋದ ಲಕ್ಷ್ಮಣಗೌಡ ಎಂಬ ನಿವಾಸಿ 12 ವರ್ಷಗಳಿಂದ ವಾಪಸ್ ಬಂದೇ ಇಲ್ಲ. ನಿರ್ಜನ ಪ್ರದೇಶದ ಅರಣ್ಯದಲ್ಲಿ ಕಾಲ್ನಡಿಗೆಯಲ್ಲೇ ಸಾಗಿ ನಾಡಿನ ಸಂಪರ್ಕ ಪಡೆಯಬೇಕು. ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿದೆ. ‘ಕೆಲ ದಿನ ಕಾದು ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಪ್ರಯೋಜನ ಆಗಿಲ್ಲ. ಅವರು ಜೀವಂತ ಬರುವ ಆಸೆ ಈಗ ಉಳಿದಿಲ್ಲ’ ಎಂದು ಲಕ್ಷ್ಮಣಗೌಡ ಮಗ ವಿಕ್ರಮ್ ಹೇಳುತ್ತಾರೆ.
ನಮ್ಮ ಜಮೀನು ಸರ್ಕಾರವೇ ವಾಪಸ್ ಪಡೆದು ಬೇರೆಡೆ ಜಮೀನು ನೀಡಬೇಕು ಎಂದು ಮನವಿ ಸಲ್ಲಿಸಿ ಸಾಕಾಗಿದೆ. ಕಾಡಿನಿಂದ ಹೊರತಂದು ನಾಗರಿಕ ಸಮಾಜದಲ್ಲಿ ಬದುಕಲು ನಮಗೂ ಅವಕಾಶ ನೀಡಬೇಕು–ಸತೀಶ್ ಬಿದರತಳ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.