ADVERTISEMENT

ಬಿಳಗಲ್ ಕರಡಿ ದಾಳಿ ಪ್ರಕರಣ: ಸಿಗದ ಪರಿಹಾರ

ರವಿ ಕೆಳಂಗಡಿ
Published 30 ಅಕ್ಟೋಬರ್ 2024, 6:39 IST
Last Updated 30 ಅಕ್ಟೋಬರ್ 2024, 6:39 IST
ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್‌ನಲ್ಲಿ  ಕರಡಿ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಸತೀಶ್ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದಾರೆ
ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್‌ನಲ್ಲಿ  ಕರಡಿ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಸತೀಶ್ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದಾರೆ    

ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಿಳಗಲ್ ಗ್ರಾಮದಲ್ಲಿ ಕರಡಿ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಕೃಷಿಕರೊಬ್ಬರಿಗೆ ಇದುವರೆಗೆ ಪರಿಹಾರ ಲಭಿಸದೆ ಸಂಕಷ್ಟದಲ್ಲಿದ್ದಾರೆ.

ತಿಂಗಳ ಹಿಂದೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೈತರ ಸತೀಶ್ (48) ಅವರ ಮೇಲೆ ಕರಡಿ ದಾಳಿ ನಡೆಸಿತ್ತು. ಸತೀಶ್‌ ಅವರ ತಲೆಗೆ ಕಚ್ಚಿ, ಮೈಮೇಲೆ ಉಗುರಿನಿಂದ ಪರಚಿ ಗಂಭೀರವಾಗಿ ಗಾಯಗೊಳಿಸಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸಕಾಲದಲ್ಲಿ ಚಿಕಿತ್ಸೆ ಲಭಿಸಿದ್ದರಿಂದ ಸತೀಶ್‌ ಜೀವ ಉಳಿದಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದು, ಮೈಮೇಲೆ ಕರಡಿ ಕಚ್ಚಿದ್ದ, ಪರಚಿದ್ದ ಗಾಯಗಳು ಒಣಗುತ್ತಿವೆ.

‘ಕರಡಿ ದಾಳಿಯಿಂದ ನನ್ನ ಜೀವ ಉಳಿದದ್ದೇ ಪುಣ್ಯ. ಚಿಕಿತ್ಸೆ ಇನ್ನೂ ಮುಂದುವರಿಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ನಮ್ಮ ಹತ್ತಿರ ಹಣ ಇಲ್ಲ. ಗಂಭೀರ ಗಾಯವಾದ್ದರಿಂದ ನನಗೆ ಇನ್ನೂ ಒಂದು ವರ್ಷ ಕೆಲಸ ಮಾಡಲು ಆಗುವುದಿಲ್ಲ. ಅರಣ್ಯ ಇಲಾಖೆಯಿಂದ ಪರಿಹಾರ ಸಿಗುತ್ತದೆ ಎಂದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೂ ಹಣ ಸಿಕ್ಕಿಲ್ಲ' ಎಂದು ಸತೀಶ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಮ್ಮ ಮನೆಯವರ ಮೇಲೆ ಕರಡಿ ದಾಳಿ ಮಾಡಿದಾಗಿನಿಂದ ನಮ್ಮ ಇಡೀ ಸಂಸಾರ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ತೊಂದರೆ ಆಗುತ್ತಿದೆ. ಎಲ್ಲ ಕಡೆ ಸಾಲ ಮಾಡಿದ್ದೇವೆ. ನಮ್ಮ ಮನೆಯವರ ಚಿಕಿತ್ಸೆಗೆ ನೆರವು ನೀಡಬೇಕು, ಕರಡಿ ದಾಳಿಯಿಂದ ಆಗಿರುವ ಹಾನಿಗೆ ಪರಿಹಾರ ಕೊಡಬೇಕು’  ಎಂದು ಸತೀಶ ಅವರ ಪತ್ನಿ ವಿಶಾಲಾಕ್ಷಿ ಮನವಿ ಮಾಡಿದರು.

Cut-off box - ಶೀಘ್ರದಲ್ಲೇ ಪರಿಹಾರ ಕರಡಿ ದಾಳಿಗೆ ಒಳಗಾದ ಸತೀಶ್ ಅವರಿಗೆ ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಕೊಡಲು ಅರಣ್ಯ ಇಲಾಖೆ ಅಗತ್ಯ ದಾಖಲೆಗಳನ್ನು ಕೇಳಿದೆ. ವೈದ್ಯಕೀಯ ವೆಚ್ಚದ ಬಿಲ್ ಮತ್ತು ದಾಖಲೆಗಳನ್ನು ಸಲ್ಲಿಸಿದ ನಂತರ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಚೇತನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.