ADVERTISEMENT

‘ಜನರ ಕಷ್ಟಕ್ಕೆ ಸ್ಪಂದಿಸುವುದೇ ಯೋಜನೆಗಳ ಉದ್ದೇಶ’

ಗ್ಯಾರಂಟಿ ಯೋಜನೆಗಳ ಬೀರೂರು ಹೋಬಳಿ ಮಟ್ಟದ ಜನಸ್ಪಂದನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:40 IST
Last Updated 9 ಮಾರ್ಚ್ 2024, 14:40 IST
ಬೀರೂರು ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದ ಸಂಗೊಳ್ಳಿರಾಯಣ್ಣ ರಂಗಮಂಟಪದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಬೀರೂರು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು
ಬೀರೂರು ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದ ಸಂಗೊಳ್ಳಿರಾಯಣ್ಣ ರಂಗಮಂಟಪದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಬೀರೂರು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು   

ಬೀರೂರು: ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ಯೋಜನೆಗಳ ಉದ್ದೇಶ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಬೀರೂರು ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದ ಸಂಗೊಳ್ಳಿರಾಯಣ್ಣ ರಂಗ ಮಂಟಪದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಬೀರೂರು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಬದುಕು ಬದಲಾಗಬೇಕು, ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಟೀಕೆಗಳಲ್ಲಿ ಹುರುಳಿಲ್ಲ, ₹60 ಸಾವಿರ ಕೋಟಿ ಹಣವನ್ನು ಯೋಜನೆಗಳಿಗೆ ಮೀಸಲಿಡುವ ಜತೆಗೆ ಎಲ್ಲ ಇಲಾಖೆಗಳಿಗೆ ಹಿಂದಿನ ಸರ್ಕಾರಕ್ಕಿಂತ ವಿನಿಯೋಜನೆ ಮೊತ್ತ ಹೆಚ್ಚಿಸಲಾಗಿದೆ. ಆದ್ದರಿಂದ ಅಭಿವೃದ್ಧಿ ಕುಂಠಿತ ಎನ್ನುವ ವಾದದಲ್ಲಿ ಅರ್ಥವಿಲ್ಲ. ವಿರೋಧಿಗಳ ಟೀಕೆಗೆ ಬಜೆಟ್ ಮೂಲಕ ಮುಖ್ಯಮಂತ್ರಿ ಉತ್ತರಿಸಿದ್ದಾರೆ ಎಂದು ಹೇಳಿದರು.

ADVERTISEMENT

ಕಡೂರು ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಶೇ 98ರಷ್ಟು ಫಲಾನುಭವಿಗಳನ್ನು ತಲುಪಿವೆ. ಬೀರೂರು ಹೋಬಳಿಯಲ್ಲಿ ಕಳೆದ ಎಂಟು ತಿಂಗಳಿನಲ್ಲಿ ಶಕ್ತಿ ಯೋಜನೆಯ ತಾಲ್ಲೂಕು ಮಟ್ಟದ ಅನುಷ್ಠಾನವೂ ಸೇರಿ ₹38 ಕೋಟಿಯಷ್ಟು ಹಣ ಜನರನ್ನು ತಲುಪಿದೆ. ಸರಾಸರಿಯಂತೆ ಒಂದು ಕುಟುಂಬಕ್ಕೆ ಮಾಸಿಕ ₹5-6 ಸಾವಿರ ತಲುಪುತ್ತಿದೆ. ಜಿಡಿಪಿ, ರಸ್ತೆ, ಅಣೆಕಟ್ಟುಗಳಂತೆ ಬಡಜನರ ಅಭಿವೃದ್ಧಿಯೂ ಮುಖ್ಯವಾಗಿದ್ದು, ಇದೊಂದು ಆತ್ಮಸಂತೋಷದ ಕೆಲಸವಾಗಿದೆ ಎಂದು ಬಣ್ಣಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್, ಬೀರೂರು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಮುಖಂಡ ಬೀರೂರು ದೇವರಾಜ್, ಸದಸ್ಯರಾದ ಬಿ.ಆರ್.ರವಿಕುಮಾರ್(ಎಲೆ), ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್, ಲೋಕೇಶಪ್ಪ, ಸಮೀವುಲ್ಲಾ, ಜ್ಯೋತಿ ಸಂತೋಷ್, ಜ್ಯೋತಿ ವೆಂಕಟೇಶ್, ರೋಹಿಣಿ ವಿನಾಯಕ, ಮೋಹನ ಕುಮಾರ್, ಸರಸ್ವತಿಪುರ ಪಂಚಾಯಿತಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಹುಲ್ಲೇಹಳ್ಳಿ ಪಂಚಾಯಿತಿ ಅಧ್ಯಕ್ಷ ಲೋಕೇಶಪ್ಪ ಇದ್ದರು.

ಗೃಹಲಕ್ಷ್ಮಿ ಯೋಜನೆಯಿಂದ ನಮ್ಮ ಮನೆಗಳು ನೆಮ್ಮದಿ ಕಾಣುವಂತಾಗಿದೆ. ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ಈ ಯೋಜನೆ ಜಾರಿ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ.
–ಜ್ಯೋತಿ ಸರಸ್ವತಿಪುರ

‘ಸಮಸ್ಯೆ ಇದ್ದರೇ ಸಂಪರ್ಕಿಸಿ’

ಆಡಳಿತಾತ್ಮಕ ಸಮಸ್ಯೆ ನಿವಾರಣೆಗೆ ಜನಸ್ಪಂದನ ಅಭಿಯಾನ ನೆರವಾಗಿದ್ದು ಸರ್ಕಾರವು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮೇಲ್ವಿಚಾರಣೆ ಸಲುವಾಗಿ ಪ್ರಾಧಿಕಾರ ರಚಿಸಿದೆ. ರಾಜ್ಯಮಟ್ಟದಿಂದ ತಾಲ್ಲೂಕು ಮಟ್ಟದವರೆಗೂ ಸಮಿತಿಗಳು ಇರಲಿದ್ದು ಕಡೂರು ತಾಲ್ಲೂಕಿನಲ್ಲಿ ಎಒ ಪ್ರವೀಣ್‍ಕುಮಾರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದು ಪ್ರಾಧಿಕಾರ ಕೆಲಸ ಆರಂಭಿವಾಗಲಿದೆ.

ನೀರು ಸರಬರಾಜು ಟ್ಯಾಂಕರ್ ಹೊಂದಿದವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಹಾಯವಾಣಿ 08267-221210 ಸ್ಥಾಪಿಸಿದ್ದು ಸಮಸ್ಯೆ ಇದ್ದರೇ ಸಂಪರ್ಕಿಸಿ ಎಂದು ಕಡೂರು ತಹಶೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.