ಚಿಕ್ಕಬಳ್ಳಾಪುರ: ಜನರ ಹಿತಕ್ಕಾಗಿ ನಾನು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ಬಿಡಬೇಕಾಯಿತು ಆದ್ದರಿಂದ ಉಪಚುನಾವಣೆ ಎದುರಿಸುವಂತಾಗಿದೆ. ಇದೆಲ್ಲಾ ಮಾಡಿದ್ದು ಜನರಿಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ನಗರದ 6ನೇ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ,‘ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿ ಫುಟ್‌ಬಾಲ್ ಇದ್ದಂತೆ. ಎಲ್ಲಿ ತಳ್ಳಿದರೂ, ಆಹ್ವಾನಿಸಿದರೂ ಹೋಗಬೇಕಾಗುತ್ತದೆ. ಚುನಾವಣೆಗೆ ಇನ್ನು ಕೇವಲ 9 ದಿನ ಬಾಕಿ ಇದೆ. ಕ್ಷೇತ್ರದ 17 ಗ್ರಾಮ ಪಂಚಾಯಿತಿ, ಅರ್ಧಕ್ಕಿಂತ ಹೆಚ್ಚು ನಗರಸಭೆ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಬೇಕಿದೆ. ಮತದಾರರು ನನ್ನ ಪರವಾಗಿ ಪ್ರಚಾರ ಮಾಡಬೇಕು' ಎಂದು ಮನವಿ ಮಾಡಿದರು.
ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಬಂದು ನನ್ನ ವಿರುದ್ಧ ಮಾತನಾಡಿ ತೆರಳಿದ್ದಾರೆ. ಅಂದು ಜನರಿಗೆ ಅನ್ಯಾಯವಾದಾಗ, ನಾನು ದನಿ ಎತ್ತಿದಾಗ ಇವರೆಲ್ಲಾ ಎಲ್ಲಿದ್ದರು? ಈಗ್ಯಾಕೆ ಬಂದು ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮರಳಿ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ. ಇದು ಜಿಲ್ಲೆಯಲ್ಲೇ ಉಳಿಯಬೇಕೆಂದರೆ ತಾವೆಲ್ಲಾ ಬಿಜೆಪಿಗೆ ಮತ ಹಾಕಿ ನನ್ನನ್ನು ಗೆಲ್ಲಿಸಬೇಕು. ಆಗ ಮಾತ್ರ ಇನ್ನಷ್ಟು ಅಭಿವೃದ್ಧಿ ಜಿಲ್ಲೆಗೆ ಬರಲು ಸಾಧ್ಯ ಎಂದರು.
ಕಾಂಗ್ರೆಸ್ ಅಭ್ಯರ್ಥಿ ದೇವನಹಳ್ಳಿಯವರು, ಜೆಡಿಎಸ್ ಅಭ್ಯರ್ಥಿ ಶಿಡ್ಲಘಟ್ಟದವರನ್ನು ಕಣದಲ್ಲಿದ್ದಾರೆ ಇವತ್ತು ಕಬಡ್ಡಿ, ಕ್ರಿಕೆಟ್ ಮ್ಯಾಚ್ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿಯವರ ನಡುವೆ ನಡೆಯುತ್ತಿದೆ. ಇದೇ ರೀತಿ ಚುನಾವಣೆ ಕೂಡ ಆಗಿದೆ. ಇಲ್ಲಿ ಯಾರಿಗೆ ಬೆಂಬಲ ನೀಡುತ್ತೀರಿ ಎಂದು ನಿರ್ಧರಿಸಿ. ಚುನಾವಣೆಯು ನನ್ನ ಚುನಾವಣೆ ಅಲ್ಲ, ನಿಮ್ಮೆಲ್ಲರ ಚುನಾವಣೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ‘ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗದೇ ಹೊರಗಿನವರನ್ನು ತಂದು ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸುಧಾಕರ್ ಶಾಸಕರಾಗಿ 6 ವರ್ಷ 4 ತಿಂಗಳಲ್ಲಿ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಖಂಡಿತವಾಗಿ ಇವರು ಡಿ.9ರಂದು ಶಾಸಕರಾಗಿ ಗೆದ್ದು ಡಿ.10ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬರಲಿದ್ದಾರೆ’ ಎಂದು ಭವಿಷ್ಯ ನುಡಿದರು.
ನಟಿ ಶ್ರುತಿ ಮಾತನಾಡಿ, ‘ಬಿಜೆಪಿ ಪಕ್ಷಕ್ಕೆ ಬಂದಿರುವ ಪ್ರತಿಯೊಬ್ಬ ಶಾಸಕರೂ ಹಿಂದೆ ಬೇರೆ ಪಕ್ಷದಿಂದ ಶಾಸಕರಾಗಿದ್ದವರೇ. ಯಾವುದೇ ವ್ಯಕ್ತಿ ಗೆಲ್ಲಬೇಕೆಂದರೆ, ಕಾರ್ಯಕರ್ತರು, ಜನರು ನಿರ್ಧರಿಸಬೇಕಾಗುತ್ತದೆ. ಹಲವು ಯೋಜನೆ ಮಾಡುವ ಮನಸ್ಸು ಸುಧಾಕರ್‌ಗೆ ಇದೆ. ಅವರು ಅಭಿವೃದ್ಧಿ ಕೆಲಸ ಮಾಡುವ ಅಪಾರ ಹಂಬಲ ಹೊತ್ತವರಾಗಿದ್ದಾರೆ. ಇವರಿಂದ ಸಾಕಷ್ಟು ಪ್ರಗತಿ ನಿರೀಕ್ಷಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.