ಚಿಕ್ಕಮಗಳೂರು: ‘ಬಿಜೆಪಿಯವರಿಗೆ ಭಯ ಇದೆ. ಹೀಗಾಗಿ, ಅವರ ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕುಟುಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಶಾಸಕರು ನಮ್ಮೊಂದಿಗೆ ಇದ್ದಾರೆ, ಅವರವರ ಕ್ಷೇತ್ರಗಳಲ್ಲಿ ಇದ್ದಾರೆ. ಶಾಸಕರನ್ನು ಕೋಣೆಯಲ್ಲಿ ಕೂಡಿಹಾಕಬೇಕಾ’ ಎಂದು ಪ್ರಶ್ನಿಸಿದರು.
‘ರಾಜ್ಯ ರಾಜಕೀಯದಲ್ಲಿ ಅಲ್ಲೊಲಕಲ್ಲೊಲ ಏನೂ ಇಲ್ಲ, ಸಮ್ಮಿಶ್ರ ಸರ್ಕಾರ ಸುಸ್ಥಿರವಾಗಿದೆ’ ಉತ್ತರಿಸಿದರು. ‘ಕಾಂಗ್ರೆಸ್‌ನ ಕಾರ್ಯಕರ್ತರು ನಾವು. ಪಕ್ಷದಿಂದಾಗಿ ಸಚಿವರಾಗಿದ್ದೇವೆ. ಪಕ್ಷದ ಆದೇಶಕ್ಕೆ ತಲೆಬಾಗುತ್ತೇವೆ. ಹೈಕಮಾಂಡ್, ನಾಯಕರು ಸೂಚಿಸಿದರೆ ಸಚಿವ ಸ್ಥಾನ ತೊರೆಯಲು ಸಿದ್ಧರಾಗಿದ್ದೇವೆ. ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ’ ಎಂದರು.
‘ಬಿಜೆಪಿ ಹಿಂದಿನ ಬಾಗಿಲ ರಾಜಕಾರಣ ಮಾಡಿ ಗೋವಾ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಏನಾಯಿತು? ಅವರ ಆಟ ಮುಂದುವರಿಸಲಿ ಅದಕ್ಕೆ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಲೋಕಸಭೆ ಚುನಾವಣೆ ನಂತರ ಎಲ್ಲ ತಂತ್ರಗಳು ಮುಗಿದುಹೋಗುತ್ತವೆ’ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದಿರುವುದರಲ್ಲಿ ವಿಶೇಷ ಇಲ್ಲ. ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗೆ ಬಂದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.