ADVERTISEMENT

ಶೃಂಗೇರಿ: ಅಡಿಕೆ, ಕಾಫಿ, ಕಾಳು ಮೆಣಸಿಗೆ ಕೊಳೆ ರೋಗ

2ನೇ ಸುತ್ತಿನ ಬೋರ್ಡೊ ದ್ರಾವಣ ಸಿಂಪಡಣೆಗೆ ಮುಂದಾದ ಬೆಳೆಗಾರರು

ರಾಘವೇಂದ್ರ ಕೆ.ಎನ್
Published 30 ಜುಲೈ 2024, 5:52 IST
Last Updated 30 ಜುಲೈ 2024, 5:52 IST
ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ಕೆರೆಮನೆಯ ರೈತರ ತೋಟದಲ್ಲಿ ಬೋರ್ಡೊ ದ್ರಾವಣ ಸಿದ್ಧಪಡಿಸುತ್ತಿರುವುದು
ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ಕೆರೆಮನೆಯ ರೈತರ ತೋಟದಲ್ಲಿ ಬೋರ್ಡೊ ದ್ರಾವಣ ಸಿದ್ಧಪಡಿಸುತ್ತಿರುವುದು   

ಶೃಂಗೇರಿ: ತಾಲ್ಲೂಕಿನಲ್ಲಿ ಸತತ ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸಿಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಇದೀಗ ಎರಡನೆಯ ಸುತ್ತಿನ ಬೋರ್ಡೊ ದ್ರಾವಣ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಮಳೆ ಮಧ್ಯೆ ಬಿಡುವು ನೀಡಿದಾಗ ಔಷಧ ಸಿಂಪಡಣೆ ನಡೆಯುತ್ತಿದೆ. ಕೆಲವರು ಈಗಾಗಲೇ ಎರಡು ಬಾರಿ ಮತ್ತೆ ಕೆಲವರು ಮೂರನೆಯ ಬಾರಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.

ಕೇವಲ 33  ದಿನಗಳಲ್ಲಿ 177.5 ಸೆಂ.ಮೀ ಮಳೆ ಆಗಿದ್ದು, ಅಡಿಕೆ ಗೊನೆ, ಕಾಳು ಮೆಣಸಿನ ಬಳ್ಳಿ ಕೊಳೆತು ಹೋಗಿದೆ. ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಳದಿಂದ ಕಾಯಿ ಕೊಳೆತು ಉದುರಲು ಆರಂಭಿಸಿದೆ. ಕೆರೆಕಟ್ಟೆ ಮತ್ತು ಕಿಗ್ಗಾ ಭಾಗದಲ್ಲಿ ದಟ್ಟವಾದ ಅರಣ್ಯ ಇದ್ದು, ಈ ಭಾಗದಲ್ಲಿ ಉಳಿದ ಪ್ರದೇಶಗಳಿಂತ ಹೆಚ್ಚು ಮಳೆ ಬೀಳುತ್ತಿದ್ದು, ಈಗಾಗಲೇ ಸಾಕಷ್ಟು ಬೆಳೆ ಹಾನಿ ಆಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೈತರು 3 ರಿಂದ 4 ಬಾರಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡುತ್ತಾರೆ.

ಬೋರ್ಡೊ ದ್ರಾವಣಕ್ಕೆ ಬಳಸುವ ಮೈಲುತುತ್ತಿನ (ಕಾಪರ್‌ ಸಲ್ಫೇಟ್‌) ದರ ದುಬಾರಿಯಾಗಿದೆ. ಔಷಧ ಸಿಂಪಡಿಸುವ ಕಾರ್ಮಿಕರ ಕೂಲಿ, ಯಂತ್ರ ಮತ್ತು ಪೆಟ್ರೋಲ್ ಖರ್ಚು ಹೆಚ್ಚಿದೆ. ಔಷಧಿ ಸಿಂಪಡಣೆ ಮಾಡುವ ಕಾರ್ಮಿಕರು ಕಡಿಮೆ ಇದ್ದು, ಮಳೆ ಕಡಿಮೆಯಾದ ಕೂಡಲೇ ಅವರಿಗೆ ವಿಪರೀತ ಬೇಡಿಕೆ ಇದೆ. ಒಂದು ಎಕರೆ ಅಡಿಕೆ ತೋಟಕ್ಕೆ ಔಷಧ ಸಿಂಪಡಣೆಗೆ  ₹15 ಸಾವಿರಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ.  ಒಂದು ತೋಟಕ್ಕೆ ಕೊಳೆ ರೋಗ ಬಂದರೆ, ಅದು ಪಕ್ಕದ ತೋಟಕ್ಕೆ ಹಬ್ಬುವ ಸಾಧ್ಯತೆಯೂ ಇರುವುದರಿಂದ ಸಕಾಲದಲ್ಲಿ ಔಷಧ ಸಿಂಪಡಣೆ ಮಾಡಿ ರೋಗ ನಿಯಂತ್ರಿಸದಿದ್ದಲ್ಲಿ ಇಡೀ ಬೆಳೆಯೇ ನಾಶವಾಗುವ ಅಪಾಯವಿದೆ.

ADVERTISEMENT
ಬೋರ್ಡೊ ಸಿಂಪಡಣೆಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಗುಣ ಮಟ್ಟದ ಮೈಲುತುತ್ತು ಸುಣ್ಣ ಮತ್ತು ರಾಳವನ್ನು ಬಳಸಬೇಕು.
-ಶ್ರೀಕೃಷ್ಣ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ
ಅಡಿಕೆ ತೋಟಕ್ಕೆ ಬೋರ್ಡೊ ಸಿಂಪಡಿಸುವ ಕಾರ್ಮಿಕರ ಕೊರತೆ ತೀವ್ರವಾಗಿದೆ. ಮಳೆ ಮುಂದುವರಿದರೆ ಬೆಳೆ ಕೈಗೆ ಸಿಗುವುದಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು
-ಕೆ.ಎಂ ರಮೇಶ್ ಭಟ್, ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.