ADVERTISEMENT

ನರಸಿಂಹರಾಜಪುರ: ಹೊರೆಯಾಗುತ್ತಿದೆ ಎಲ್‌ಟಿ4 ವಿದ್ಯುತ್ ಶುಲ್ಕ ಬಾಕಿ

ಪಾವತಿ ಬಗ್ಗೆ ರೈತರಿಗೆ ಮಾಹಿತಿಯೇ ಇಲ್ಲ: ಬಡ್ಡಿಗೆ ಚಕ್ರಬಡ್ಡಿ ಸೇರಿ ಬೆಳೆಯುತ್ತಿದೆ ಬಾಕಿ

ಕೆ.ವಿ.ನಾಗರಾಜ್
Published 25 ಮಾರ್ಚ್ 2024, 7:26 IST
Last Updated 25 ಮಾರ್ಚ್ 2024, 7:26 IST
ರೈತರ ಜಮೀನಿನಲ್ಲಿರುವ ವಿದ್ಯುತ್ ಪಂಪ್ ಸೆಟ್ –ಸಾಂದರ್ಭಿಕ ಚಿತ್ರ
ರೈತರ ಜಮೀನಿನಲ್ಲಿರುವ ವಿದ್ಯುತ್ ಪಂಪ್ ಸೆಟ್ –ಸಾಂದರ್ಭಿಕ ಚಿತ್ರ   

ನರಸಿಂಹರಾಜಪುರ: ಆಹಾರ ಧಾನ್ಯ ಬೆಳೆಯುವ ರೈತರಿಗೆ ನೀರಾವರಿ ಪಂಪ್ ಸೆಟ್ ಬಳಸಲು ನೀಡಲಾಗಿದ್ದ ಎಲ್‌ಟಿ4(ಎ) ವಿದ್ಯುತ್ ಸಂಪರ್ಕದ ಬಳಕೆಯ ಶುಲ್ಕ ವರ್ಷದಿಂದ ವರ್ಷಕ್ಕೆ ಬಡ್ಡಿ ಸೆರ್ಡೆಯಾಗಿ ದೊಡ್ಡ ಹೊರೆಯಾಗಿ ಪರಣಮಿಸಿದೆ.

1990ರ ದಶಕದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ರೈತರಿಗೆ ನೀರಾವರಿ ಪಂಪ್ ಸೆಟ್ ಬಳಸಲು ಅಂದಿನ ಕೆಇಬಿಯಿಂದ ಎಲ್‌ಟಿ4(ಎ) ಅಡಿ ರೈತರಿಂದ ಠೇವಣಿ ಇರಿಸಿಕೊಂಡು ವಿದ್ಯುತ್ ಸಂಪರ್ಕ ನೀಡಲಾಗಿತ್ತು. ವಿದ್ಯುತ್ ಬಳಕೆಗೆ ಕನಿಷ್ಠ  ದರ ನಿಗದಿ ಮಾಡಲಾಗಿತ್ತು.

ಆ ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು 10 ಎಚ್.ಪಿ ತನಕ ನೀರಾವರಿ ಪಂಪ್ ಸೆಟ್ ಬಳಸುವವರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿತು. ಆದರೆ, ಅದಕ್ಕೂ ಮೊದಲು ವಿದ್ಯುತ್ ಬಳಕೆ ಮಾಡಿ ಉಳಿಸಿಕೊಂಡಿದ್ದ ಬಾಕಿ ಶುಲ್ಕದ ಲೆಕ್ಕ ರೈತರ ಹೆಸರಿನಲ್ಲಿ ಹಾಗೇ ಉಳಿದುಕೊಂಡಿದೆ.

ADVERTISEMENT

ಉಚಿತ ವಿದ್ಯುತ್ ಯೋಜನೆ ಆರಂಭವಾದ ಬಳಿ ರೈತರು ತಮ್ಮ ಖಾತೆಯಲ್ಲಿ ಉಳಿಕೆ ಬಾಕಿಯನ್ನು ಪಾವತಿಸಿಲ್ಲ. ಸರ್ಕಾರ ಮತ್ತು ಇಲಾಖೆ ರೈತರಿಂದ ಬಾಕಿ ಶುಲ್ಕ ವಸೂಲಿ ಮಾಡಲು ಗಮನಹರಿಸಲಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ 1,204 ರೈತರು ನೀರಾವರಿ ಪಂಪ್ ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದಿದ್ದು, ಅವರು ಉಳಿಸಿ ಕೊಂಡಿರುವ ಬಾಕಿ ₹ 1.66 ಕೋಟಿ.

ಈ ಸೌಲಭ್ಯ ಪಡೆದಿದ್ದ ಸಾಕಷ್ಟು ರೈತರು ಮೃತರಾಗಿದ್ದಾರೆ. ರೈತ ಕುಟುಂಬದವರಿಗೆ ಬಾಕಿಯ ಮಾಹಿತಿಯೂ ಇಲ್ಲ. ಆದರೆ, ರೈತರ ಬಾಕಿಯ ಜತೆಗೆ ವರ್ಷದಿಂದ ವರ್ಷಕ್ಕೆ ಬಡ್ಡಿಯೂ ಸೇರಿಕೊಂಡು ಮೊತ್ತ ದೊಡ್ಡದಾಗಿ ಬೆಳೆದಿದೆ. ಈ ರೀತಿ ಬಾಕಿ ಉಳಿಸಿಕೊಂಡ ರೈತರ ಕುಟುಂಬದವರು ನೀರಿನ ಹಕ್ಕಿನ ಪತ್ರ, ಮೀಟರ್‌ನ ಹೆಸರು ಬದಲಾವಣೆ, ಆಸ್ತಿ ಹಂಚಿಕೆಯಾದಾಗ ಬೇರೆ ಮೀಟರ್ ಅಳವಡಿಸಲು ಅರ್ಜಿ ಸಲ್ಲಿಸಿದಾಗ ಕಡತ ಪರಿಶೀಲಿಸಿದಾಗ ಬಾಕಿ ಮೊತ್ತದ ಮಾಹಿತಿ ಲಭಿಸುತ್ತದೆ. ಬಾಕಿ ಮೊತ್ತ ಪಾವತಿಸಿದರೆ ಪಾತ್ರ ರೈತರಿಗೆ ಸೇವೆಗಳು ಲಭ್ಯವಾಗುತ್ತದೆ. 

‘ಎಲ್‌ಟಿ4(ಎ) ಅಡಿಯಲ್ಲಿ ನಮ್ಮ ಹಿರಿಯರು ವಿದ್ಯುತ್ ಸಂಪರ್ಕ ಪಡೆದು ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಇಲಾಖೆ ನೋಟಿಸ್ ನೀಡಿಲ್ಲ. ವಸೂಲಿಗೂ ಮುಂದಾಗಿಲ್ಲ. ಸರ್ಕಾರ ಇದನ್ನು ಮನ್ನಾ ಕೂಡ ಮಾಡಿಲ್ಲ. ನಾವೇ ಬೇರೆ ಸೇವೆ ಪಡೆಯಲು ಹೋದಾಗ ಹೇಳುತ್ತಿದ್ದಾರೆ’ ಎಂಬುದು ರೈತರ ಆರೋಪ.

‘ಮೆಸ್ಕಾಂ ಎಂ.ಡಿ ಅವರನ್ನು ‘ಪ್ರಜಾವಾಣಿ’ ಕಾರ್ಯಕ್ರಮದಲ್ಲಿ ವಿಚಾರಿಸಿದ್ದೆ. ನನ್ನ ದೂರವಾಣಿ ಸಂಖ್ಯೆ ಪಡೆದಿದ್ದರು. ಈವರೆಗೆ ಮಾಹಿತಿ ನೀಡಿಲ್ಲ’ ಎಂದು ಎನ್.ಆರ್.ಪುರದ ನಿವಾಸಿ ಎಚ್.ಜಿ.ಸುಧಾಕರ್ ತಿಳಿಸಿದರು.

ಎಲ್‌ಟಿ4(ಎ) ಅಡಿ ಸಂಪರ್ಕ ಪಡೆದ ರೈತರ ಸಂಖ್ಯೆ 1,204 ರೈತರು ಪಾವತಿಸಬೇಕಾದ ಬಾಕಿ ಶುಲ್ಕ ₹1.66 ಕೋಟಿ  ಸಮಸ್ಯೆ ಬಗೆಹರಿಸಲು ರೈತರ ಆಗ್ರಹ
ಎಲ್‌ಟಿ4(ಎ) ಅಡಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲಾಗಿದೆ. ಕೆಲವು ಸೌಲಭ್ಯ ಪಡೆಯಲು ಬಂದಾಗ ಬಾಕಿ ಪಾವತಿಸಿಕೊಂಡು ಸೌಲಭ್ಯ ಒದಗಿಸಲಾಗಿದೆ. ಕೆಲವರು ಬಾಕಿ ಪಾವಸಿದ್ದಾರೆ. ಕೆಲವರು ಪಾವತಿಸಿಲ್ಲ.
ಗೌತಮ್‌ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್
ಉಳಿಸಿಕೊಂಡಿರುವ ಬಾಕಿ ಶುಲ್ಕ ರೈತರ ಮೇಲೆ ತೂಗುಗತ್ತಿಯಾಗಿದೆ. ಸರ್ಕಾರ ಬಾಕಿ ಮನ್ನಾ ಮಾಡುವ ಮೂಲಕ ಸಮಸ್ಯೆ ಬಗೆಹರಿಸಬೇಕು.
ವಿನಾಯಕ ಮಾಳೂರು ದಿಣ್ಣೆ ವಿದ್ಯುತ್ ಬಳಕೆದಾರರ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.