ADVERTISEMENT

ಶೃಂಗೇರಿ: ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ನಾಲ್ಕುಪಟ್ಟು ಹೆಚ್ಚಳ, ಆಕ್ಷೇಪ

ರಾಘವೇಂದ್ರ ಕೆ.ಎನ್
Published 5 ಮೇ 2024, 6:38 IST
Last Updated 5 ಮೇ 2024, 6:38 IST
ಶೃಂಗೇರಿ ಪಟ್ಟಣ ಪಂಚಾಯಿತಿ  
ಶೃಂಗೇರಿ ಪಟ್ಟಣ ಪಂಚಾಯಿತಿ     

ಶೃಂಗೇರಿ: ಪಟ್ಟಣ ಪಂಚಾಯಿತಿಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ಹೆಚ್ಚಳಕ್ಕೆ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಲಿ ದರವೇ ಭಾರವಾಗಿದ್ದು, ಮತ್ತೆ ದರವನ್ನು ನಾಲ್ಕುಪಟ್ಟು ಹೆಚ್ಚಿಸಿ ಪರಿಷ್ಕರಿಸಲಾಗಿದೆ. ವ್ಯಾಪಾರ, ವಹಿವಾಟು ಕಡಿಮೆ ಆಗಿರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಸಣ್ಣ ಅಂಗಡಿಗೆ ಪರವಾನಗಿ ನವೀಕರಣ ಶುಲ್ಕವನ್ನು ₹300ರಿಂದ ₹1,000ಕ್ಕೆ, ರೇಡಿಯೊ, ಟಿವಿ, ವಾಚ್, ಗೃಹೋಪಯೋಗಿ ಸಾಮಗ್ರಿ ಮಾರಾಟದ ಅಂಗಡಿಗಳ ಪರವಾನಗಿ ನವೀಕರಣ ಶುಲ್ಕವನ್ನು ₹600ರಿಂದ ₹2,000ಕ್ಕೆ, ಕೃಷಿ ಪರಿಕರ, ಶಾಮಿಯಾನ, ಫ್ಯಾನ್ಸಿ ಸ್ಟೋರ್‌ಗಳಿಗೆ ₹750ರಿಂದ ₹3,000ಕ್ಕೆ, ಬಾಳೆ ಮಂಡಿಗಳಿಗೆ ₹600ರಿಂದ ₹3,000ಕ್ಕೆ ಹೆಚ್ಚಳ ಮಾಡಲಾಗಿದೆ.

ADVERTISEMENT

ನೀರಿನ ಶುಲ್ಕ ಏರಿಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಮತ್ತು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳುಗುಡ್ಡೆ, ಗಿಣಿಗಿಣಿ, ಕಾಂಚೀನಗರ, ಮಾನುಗಾರು, ಭಕ್ತಂಪುರದ ಜನರಿಗೆ ತುಂಗಾನದಿಯ ಜಾಕ್‌ವೆಲ್‌ನಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ವಸತಿ ಉದ್ದೇಶದ ನೀರು ಶುಲ್ಕವನ್ನು ₹80ರಿಂದ ₹200ಕ್ಕೆ, ವಾಣಿಜ್ಯ ₹160ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಮಾ.1 ರಂದು ಪಟ್ಟಣ ಪಂಚಾಯಿತಿಯಲ್ಲಿ ನಡೆದ ಮುಖ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ಇಬ್ಬರೇ ಇರುವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಜನಪ್ರತಿನಿಧಿಗಳ ಸಲಹೆ ಪಡೆದೆ ಏಕಾಏಕಿ ದರ ಏರಿಕೆ ಸರಿಯಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ ಕಾರಣ ಒಂದು ವರ್ಷದಿಂದ ಆಡಳಿತ ಅತಂತ್ರವಾಗಿದೆ. ಉದ್ದಿಮೆ ಪರವಾನಗಿ ನವೀಕರಣ ದರ ಏರಿಕೆ ಮಾಡಿ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಏಕಾಏಕಿ ನಾಲ್ಕುಪಟ್ಟು ಶುಲ್ಕ ಏರಿಸಿರುವುದು ಸರಿಯಲ್ಲ. ಈ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದು, ಪರೀಶಿಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಯೋಜನಾಧಿಕಾರಿ ಚಂದ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯದೆ ಸರ್ವಾಧಿಕಾರಿಯಂತೆ ವರ್ತಿಸಿ ದರವನ್ನು ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ವರ್ತಕರಿಂದ ಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟಿಸಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಗೇರಬೈಲು ಶಂಕರಪ್ಪ ಹೇಳಿದ್ದಾರೆ.

ಪ.ಪಂ. ಆದಾಯ ದೃಷ್ಟಿಯಿಂದ ಏ.1ರಿಂದ ಜಾರಿಗೆ ಬರುವಂತೆ ಉದ್ದಿಮೆ ಪರವಾನಗಿ ನವೀಕರಣ ಶುಲ್ಕ ಏರಿಕೆ ಮಾಡಲಾಗಿದೆ.
-ಶ್ರೀಪಾದ, ಮುಖ್ಯಾಧಿಕಾರಿ
ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ಉದ್ದಿಮೆ ಪರವಾನಿಗೆ ದರ ಪರಿಷ್ಕರಿಸುವ ಪಟ್ಟಿ 
ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ಉದ್ದಿಮೆ ಪರವಾನಿಗೆ ದರ ಪರಿಷ್ಕರಿಸುವ ಪಟ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.