ಕಡೂರು: ತಾಲ್ಲೂಕಿನ ಗಿರಿಯಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿದೆ.
ಶೈಕ್ಷಣಿಕ, ಧಾರ್ಮಿಕ ಕೇಂದ್ರವಾದ ಗಿರಿಯಾಪುರದಲ್ಲಿ 1920ರಲ್ಲಿ, ಕೆ. ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕ 11 ಸದಸ್ಯರು ಆರಂಭಿಸಿದ ಬಸವೇಶ್ವರ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ ಆರಂಭಿಕ ಷೇರು ಬಂಡವಾಳ ₹75 ಮಾತ್ರ. 1925ರಲ್ಲಿ ಗಿರಿಯಾಪುರದ ಪ್ರತಿ ಮನೆಯವರು ₹10 ವಂತಿಗೆ ನೀಡಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿದ್ದರು. ಈಗಲೂ ಆ ಕಟ್ಟಡ ಸುಸ್ಥಿತಿಯಲ್ಲಿದೆ.
ಸಂಘಕ್ಕೆ 1960ರಲ್ಲಿ ‘ವೃಷಭೇಂದ್ರ ಸೇವಾ ಸಹಕಾರ ಸಂಘ ನಿಯಮಿತ’ ಎಂದು ಹೆಸರಿಡಲಾಯಿತು. 1976ರಲ್ಲಿ ‘ವ್ಯವಸಾಯ ಸೇವಾ ಸಹಕಾರ ಸಂಘ’ ಎಂದು ಹೆಸರಾಯ್ತು. 2014ರಿಂದ ‘ಗಿರಿಯಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ವಾಗಿ ಮುಂದುವರೆದಿದೆ.
ಹಂತ ಹಂತವಾಗಿ ಏಳಿಗೆ ಕಾಣುತ್ತಾ ಬಂದ ಸಂಘ, 1975ರಲ್ಲಿ ಸುವರ್ಣ ಮಹೋತ್ಸವ ಆಚರಿಸಿತು. 2005ರಲ್ಲಿ ಸಂಘದ ವತಿಯಿಂದಲೇ ಕಿಸಾನ್ ಸೇವಾ ಕೇಂದ್ರ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲಾಯಿತು. ಇದರ ನಿರ್ವಹಣೆಗಾಗಿ ‘ಅತ್ಯುತ್ತಮ ಡೀಲರ್ ಪ್ರಶಸ್ತಿ’ ದೊರೆತಿದೆ. ಇಲ್ಲಿ ಪ್ರತಿ ತಿಂಗಳೂ ಸರಾಸರಿ ₹50 ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಯುತ್ತಿದೆ.
1920ರಿಂದ ಇಲ್ಲಿಯ ತನಕ ಒಟ್ಟು 15 ಜನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಪ್ರಸ್ತುತ 1,391 ಸದಸ್ಯರಿದ್ದಾರೆ. ₹151.27 ಕೋಟಿ ವ್ಯವಹಾರ ನಡೆದಿದ್ದು, 2023-24ನೇ ಸಾಲಿನಲ್ಲಿ ₹49.82 ಲಕ್ಷ ಲಾಭ ಗಳಿಸಿದೆ. ಸತತ ಹತ್ತು ವರ್ಷದಿಂದ ಷೇರುದಾರರಿಗೆ ಶೇ 23 ಡಿವಿಡೆಂಡ್ ವಿತರಿಸುತ್ತಿದ್ದು, ₹2.42 ಕೋಟಿ ಸ್ವಂತ ಬಂಡವಾಳ ನಿಧಿ ರೂಪದಲ್ಲಿದೆ. ₹17.11 ಕೋಟಿ ಸಾಲ ನೀಡಿದ್ದು, ಶೇ 100ರಷ್ಟು ಮರುಪಾವತಿಯಿದೆ.
ಈ ನೂರು ವರ್ಷಗಳಲ್ಲಿ ಸಂಘದಲ್ಲಿ ಎಂದೂ ಚುನಾವಣೆ ನಡೆದಿಲ್ಲ. ಪ್ರತಿ ಆಡಳಿತ ಮಂಡಳಿಯೂ ಅವಿರೋಧವಾಗಿಯೇ ಆಯ್ಕೆಯಾಗುವುದು ಸಂಘದ ವಿಶೇಷ. ಸಂಘಕ್ಕೆ ಅತ್ಯುತ್ತಮ ಸಂಘ ಎಂಬ ಮೈಸೂರು ವಿಭಾಗೀಯ ಮಟ್ಟದ ಪ್ರಶಸ್ತಿ, ಸತತವಾಗಿ ನಾಲ್ಕು ವರ್ಷ ಹಾಗೂ ಒಟ್ಟು ಹತ್ತು ಬಾರಿ ಅಪೆಕ್ಸ್ ಬ್ಯಾಂಕಿನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗಳು ದೊರೆತಿವೆ.
ಸಂಘ ಆರಂಭವಾದಾಗಿನಿಂದ 1975ರ ತನಕ ಕಾರ್ಯದರ್ಶಿಗಳಾ ಗಿದ್ದವರು ವೇತನ ಪಡೆಯದೇ ಸಂಘದ ಅಭಿವೃದ್ಧಿಗಾಗಿ ದುಡಿದಿದ್ದರು. ಜಿ.ಸಿ. ಶಿವರುದ್ರಪ್ಪ, ಜಿ.ಎನ್. ಶಾಂತವೀರಪ್ಪ, ಜಿ.ಕೆ. ಮಹಾಂತಪ್ಪ, ಜಿ.ಬಿ. ಮುರುಗೇಶಪ್ಪ ಮುಂತಾದವರು ಇವರಲ್ಲಿ ಪ್ರಮುಖರು. ಜಿ.ಎಸ್. ಸತೀಶ್ ನಾಲ್ಕು ಅವಧಿ ಅಧ್ಯಕ್ಷರಾಗಿದ್ದು, ಪ್ರಸ್ತುತ ನಿರ್ದೇಶಕರಾಗಿ ಕ್ರಿಯಾಶೀಲರಾಗಿದ್ದಾರೆ.
ಸಂಘದ ಶತಮಾನೋತ್ಸವ ಕಾರ್ಯಕ್ರಮ ಅ. 28ರಂದು ನಡೆಯಲಿದ್ದು, ಇದಕ್ಕಾಗಿ ಶತಮಾನೋತ್ಸವ ಸಮಿತಿ ರಚನೆಯಾಗಿದೆ. 100 ವರ್ಷಗಳ ನೆನಪಲ್ಲಿ ಶತಮಾನೋತ್ಸವ ಭವನ ನಿರ್ಮಾಣವಾಗಿದ್ದು, ‘ಶತಮಾನ’ ಎಂಬ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.
ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಅಪೂರ್ವ ಅನುಭವ. ಸಂಘದೊಡನೆ ನನ್ನ ಒಡನಾಟ ನಿರಂತರಜಿ.ಸಿ.ಪ್ರಭುಕುಮಾರ್, ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.