ಆಲ್ದೂರು: ಚಂಡಗೋಡು–ಗುಡ್ಡದೂರು ಗ್ರಾಮದ ನಡುವೆ ಬಸ್ ನಿಲ್ದಾಣದ ಪಕ್ಕದಲ್ಲಿ ಹಾದುಹೋಗುವ ಸೇತುವೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ಕುಸಿತದ ಭೀತಿ ಎದುರಾಗಿದೆ.
ಚಂಡಗೋಡು ಗ್ರಾಮವು ದೊಡ್ಡ ಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, 100ಕ್ಕೂ ಹೆಚ್ಚು ಮನೆಗಳಿವೆ. ಗುಡ್ಡದೂರು ಗ್ರಾಮವು ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಇಳೆಖಾನ್, ಕಠಾರದಳ್ಳಿ ಗ್ರಾಮಗಳು ಪಕ್ಕದಲ್ಲಿ ಇದ್ದು, ಮೂರು ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ.
ಗುಡ್ಡದೂರಿನಿಂದ ಚಂಡಗೋಡು ಗ್ರಾಮಕ್ಕೆ ಹೋಗಲು ಸಂಪರ್ಕ ರಸ್ತೆ ಇದಾಗಿದ್ದು, ದಶಕಗಳ ಹಿಂದೆ ನಿರ್ಮಿಸಿರುವ ಸೇತುವೆ ಈಗ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಕುಸಿದರೆ ಜನರು 10 ಕಿಲೋ ಮೀಟರ್ ಸುತ್ತಿಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಸ್ಥಳಿಯರಾದ ಅಶ್ರಫ್ ಮಾತನಾಡಿ, ‘ಈ ಭಾಗದ ಕಾಫಿ ಬೆಳೆಗಾರರು ಮತ್ತು ರೈತರು ಈ ರಸ್ತೆ ಮೂಲಕವೇ ಅವಶ್ಯಕ ಕೃಷಿ ಸಾಮಗ್ರಿ, ಗೊಬ್ಬರ ಸಾಗಿಸುತ್ತಾರೆ. ಸೇತುವೆ ಇಲ್ಲವಾದರೆ ಆಲ್ದೂರಿಗೆ ಬಂದು ಪುನಃ ಚಂಡಗೋಡು, ದುರ್ಗಾ ಗ್ರಾಮಗಳಿಗೆ ಸಂಚರಿಸಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವೇ ಹೊಸ ಸೇತುವೆ ನಿರ್ಮಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ನವರಾಜು ಎಚ್, ಚಂಡಗೋಡು ಗ್ರಾಮದ ಗಣೇಶ್ ಮಾತನಾಡಿ, ‘ಸೇತುವೆ ಹಳೆಯದಾಗಿದ್ದು ವಾಹನ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿನ ಭಾರ ಹೊತ್ತು ವಾಹನ ಚಾಲನೆ ಮಾಡದಂತೆ ಎಚ್ಚರಿಕೆಯ ನಾಮಫಲಕವನ್ನು ಆ ಭಾಗದಲ್ಲಿ ಹಾಕಬೇಕು’ ಎಂದು ಒತ್ತಾಯಿಸಿದರು.
ಚಿಕ್ಕಮಗಳೂರಿನಿಂದ ಆಲ್ದೂರು, ಸಾರಳ್ಳಿ ಮಾರ್ಗವಾಗಿ ಹಾದುಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಇದೇ ಸೇತುವೆ ಮೇಲೆ ಸಂಚರಿಸಿ ಗುಡ್ಡದೂರು– ಕಠಾರದಳ್ಳಿ– ಇಳೆಖಾನ್ ಗ್ರಾಮಗಳಿಗೆ ತೆರಳಿ ಅಲ್ಲಿಂದ ಕಂಡರ ಕಸ್ಕೆ, ಹೊಸಳ್ಳಿ ಮೂಲಕ ಪಟ್ಟಣಕ್ಕೆ ಬರುತ್ತದೆ. ಸೇತುವೆ ಕುಸಿದರೆ ಇರುವ ಒಂದು ಸರ್ಕಾರಿ ಬಸ್ ಕೂಡ ಬರುವುದಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.