ಕೊಟ್ಟಿಗೆಹಾರ: ಕಣ್ಣಾಯಿಸಿದಷ್ಟು ದೂರ ಬೆಟ್ಟ–ಗುಡ್ಡಗಳ ಸಾಲು, ಹಸಿರು ಕಣಿವೆ, ಅದರ ನಡುವೆ ಜೀವಕಳೆ ತುಂಬಿ ಭೋರ್ಗರೆಯುವ ಜಲಪಾತ, ಮಂಜಿನ ಮುಸುಕು.. ಇದು ಚಾರ್ಮಾಡಿ ಘಾಟಿಯಲ್ಲಿ ವಾಹನದಲ್ಲಿ ಸಾಗುವವರಿಗೆ ಕಾಣುವ ಸೊಬಗು.
ಚಿಕ್ಕಮಗಳೂರು ಹಾಗೂ ಮಂಗಳೂರನ್ನು ಸಂಪರ್ಕಿಸುವ 28 ಕಿ.ಮೀ ಅಂಕುಡೊಂಕಿನ ರಸ್ತೆ ಚಾರ್ಮಾಡಿ ಘಾಟ್. ಮಳೆಗಾಲ ಬಂತೆಂದರೆ ಈ ಪ್ರದೇಶ ಹಸಿರು ಹೊದ್ದು ಕಂಗೊಳಿಸುತ್ತದೆ. ಮಂಜು ಮುಸುಕಿದ ವಾತಾವರಣದಲ್ಲಿ ಮಿಂಚು ಹುಳದಂತೆ ಕಾಣುವ ವಾಹನಗಳ ದೀಪ, ಕನಸಿನ ಲೋಕವನ್ನೇ ಸೃಷ್ಟಿಸುತ್ತದೆ.
ರಸ್ತೆಯಲ್ಲಿ ಬಳುಕುವ ಜಲಧಾರೆಗೆ ಮೈಯೊಡ್ಡಲು ವಾರಾಂತ್ಯದಲ್ಲಿ ಬರುತ್ತಾರೆ ಹೊರ ಜಿಲ್ಲೆಗಳ ಜನರು. ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ಸಾಗುವ ರಸ್ತೆಯಲ್ಲಿ ಅಲೇಕಾನ್ ಜಲಪಾತ ಮನೋಹರ ದೃಶ್ಯ ಕಣ್ಮನ ಸೆಳೆಯುತ್ತದೆ.ಸೋಮನ ಕಾಡಿನ ರಸ್ತೆ ಬದಿಯ ಜಲಪಾತಗಳು ನೋಡುಗರ ಕಣ್ಣಿಗೆ ಹಬ್ಬ. ರಸ್ತೆ ಬದಿಯಲ್ಲಿ ನಿಂತು ಜಲಪಾತ ನೋಡಿದರಷ್ಟೇ ಹಿತ.
ಅಲ್ಲಿನ ಪಾಚಿಗಟ್ಟಿದ ಕಲ್ಲುಗಳ ಮೇಲೆ ಹತ್ತುವುದು, ಕಟ್ಟೆಯ ಮೇಲೆ ಹತ್ತಿದರೆ ಪೊಲೀಸರು ಎಚ್ಚರಿಕೆ ನೀಡುತ್ತಾರೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತಾರೆ.
ಚಾರ್ಮಾಡಿ ಘಾಟ್‌ನಲ್ಲಿ ಮೋಜು –ಮಸ್ತಿಗೆ ಅವಕಾಶವಿಲ್ಲ. ಚಾರ್ಮಾಡಿ ಘಾಟ್ ಪರಿಸರ ವೀಕ್ಷಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಆದರೆ, ಪ್ರವಾಸಿಗರು ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಬಾರದು. ವಾರಾಂತ್ಯದಲ್ಲಿ ಪೊಲೀಸರು ನಿಗಾವಹಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ಸಂಜಯ್ ಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.