ADVERTISEMENT

ಚಿಕ್ಕಮಗಳೂರು | ದಕ್ಕದ ಪುನವರ್ವಸತಿ: ತಪ್ಪದ ಗೋಳು

ನಾಲ್ಕು ವರ್ಗಳಿಂದ ಪುನರ್ವಸತಿಗಾಗಿ ಹಲುಬುತ್ತಿರುವ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 13:37 IST
Last Updated 9 ಜುಲೈ 2023, 13:37 IST
ಇಡಕಿಣಿ ಗ್ರಾಮದಲ್ಲಿ ಚನ್ನಡಲು ಸಂತ್ರಸ್ತರ ಮನೆ ನಿರ್ಮಿಸಲು ಹಾಕಿರುವ ಅಡಿಪಾಯ ಪಾಳು ಬಿದ್ದಿರುವುದು
ಇಡಕಿಣಿ ಗ್ರಾಮದಲ್ಲಿ ಚನ್ನಡಲು ಸಂತ್ರಸ್ತರ ಮನೆ ನಿರ್ಮಿಸಲು ಹಾಕಿರುವ ಅಡಿಪಾಯ ಪಾಳು ಬಿದ್ದಿರುವುದು   

ಚಿಕ್ಕಮಗಳೂರು: ವರ್ಷಗಳು ಉರುಳಿದವು, ಮಳೆಗಾಲಗಳು ಬಂದು ಹೋದವು. 2019ರ ಮಹಾಮಳೆಯಲ್ಲಿ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪುನರ್ವಸತಿ ದೊರಕಿಲ್ಲ. ಜಿಲ್ಲಾಡಳಿತದ ಮುಂದೆ ಸಂತ್ರಸ್ತರು ಗೋಗರೆಯುವುದು ತಪ್ಪಿಲ್ಲ.

2019ರಲ್ಲಿ ಮಹಾಮಳೆಗೆ ಮೂಡಿಗೆರೆ ತಾಲ್ಲೂಕಿನ ಮಧುಗುಂಡಿ, ಮಲೆಮನೆ, ಅಲೆಖಾನ್‌ ಹೊರಟ್ಟಿ ಮೊದಲಾದ ಕಡೆಗಳಲ್ಲಿ ಕೆಲವು ಮನೆಗಳು, ತೋಟಗಳು ಕೊಚ್ಚಿ ಹೋಗಿದ್ದವು. ಗುಡ್ಡ ಭಾಗದ ಕೆಲವೆಡೆ ಮಣ್ಣು ಜರಿದಿತ್ತು.

ಮಧುಗುಂಡಿ, ಮಲೆಮನೆ ಭಾಗದಲ್ಲಿ ಮನೆ, ಆಸ್ತಿ ಎರಡನ್ನೂ ಕಳೆದುಕೊಂಡಿರುವವರು ಹೆಚ್ಚು ಇದ್ದಾರೆ. ಬಹಳಷ್ಟು ಕುಟುಂಬಗಳಿಗೆ ಜಮೀನು, ಮನೆ ಒದಗಿಸಿಲ್ಲ. ಅತಿವೃಷ್ಟಿ ಮನೆ, ಆಸ್ತಿ ಮೊದಲಾದವನ್ನು ಕಳೆದುಕೊಂಡವರು ಪರಿಹಾರ, ಪುನರ್ವಸತಿಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. 11 ಕುಟುಂಬಗಳವರು ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಈಚೆಗೆ ಉಗ್ರ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕೆಡಿಪಿ ಸಭೆಯಲ್ಲೂ ಈ ವಿಷಯವನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪ್ರಸ್ತಾಪಿಸಿದ್ದರು.

ADVERTISEMENT

ಈ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಗುರುತಿಸಿರುವ ಜಾಗ ಅರಣ್ಯ ಜಾಗ ಆಗಿರುವುದರಿಂದ ಮಂಜೂರಿಗೆ ತೊಡಕಾಗಿದೆ. ಅರಣ್ಯ ಜಾಗವೋ, ಕಂದಾಯ ಭೂಮಿಯೋ ಎಂಬುದನ್ನೂ ಗುರುತಿಸಲು ಜಂಟಿ ಸರ್ವೆ ನಡೆಯಬೇಕಿದೆ. ಇದು ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕು. ಅಲ್ಲಿಯ ತನಕ ಈ ಕುಟುಂಬಗಳು ಪುನರ್ವಸತಿಗೆ ಕಾಯಬೇಕೆ ಎಂಬುದು ಪ್ರಶ್ನೆ.

ಜಿಲ್ಲಾಡಳಿತ ಗುರುತಿಸಿರುವ ಜಾಗಗಳಿಗೆ ಹೋಗಲು ಕೆಲವರು ತಯಾರಿಲ್ಲ. ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿದ್ದವರ ಪೈಕಿ ಹಲವರಿ ಬಾಡಿಗೆ ಬಾಬ್ತನ್ನೂ ಪಾವತಿಸಿಲ್ಲ. ಸಮಸ್ಯೆ ಕಗ್ಗಂಟಾಗಿದ್ದು, ಚನ್ನಡಲುವಿನಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರು ಜಿಲ್ಲಾಡಳಿತದ ಮುಂದೆ ಹಲಬುವುದು ತಪ್ಪಿಲ್ಲ. ಆದರೆ, ಪುನರ್ವಸತಿ ಮಾತ್ರ ದಕ್ಕಿಲ್ಲ. 

(ಪ್ರಜಾವಾಣಿ ತಂಡ: ವಿಜಯಕುಮಾರ್ ಎಸ್.ಕೆ., ರವಿ ಕೆಳಗಂಡಿ, ರವಿಕುಮಾರ್‌ ಶೆಟ್ಟಿಹಡ್ಲು)

ಇಡಕಿಣಿ ಗ್ರಾಮದಲ್ಲಿ ಚನ್ನಡಲು ಸಂತ್ರಸ್ತರ ಮನೆ ನಿರ್ಮಿಸಲು ಹಾಕಿರುವ ಅಡಿಪಾಯ ಪಾಳು ಬಿದ್ದಿರುವುದು
2019ರ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಕಳಸ ತಾಲ್ಲೂಕಿನ ಚನ್ನಡಲು ಸಮೀಪದ ಧರೆ ಕುಸಿತ ಸಂಭವಿಸಿದ ಪ್ರದೇಶ (ಸಂಗ್ರಹ ಚಿತ್ರ)

4 ವರ್ಷ ಕಳೆದರೂ ಮರೀಚಿಕೆಯಾದ ಹಕ್ಕುಪತ್ರ ಕಳಸ ತಾಲ್ಲೂಕಿನ ಮರಸಣಿಗೆ ಪಂಚಾಯಿತಿ ವ್ಯಾಪ್ತಿಯ ಚನ್ನಡಲು ಗ್ರಾಮದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತ ಹಿಂದೆಂದೂ ಕಂಡಿರದಿದ್ದ ಕರಾಳ ಘಟನೆ. ಆ ದಿನ ಒಬ್ಬ ಯುವಕ ಮೃತಪಟ್ಟು ಕೆಲ ಮನೆಗಳು ನೆಲಸಮ ಆಗಿದ್ದವು. ವಿಪರ್ಯಾಸ ಎಂದರೆ 4 ವರ್ಷ ಕಳೆದಿದ್ದರೂ ಈಗಲೂ ಸಂತ್ರಸ್ತರಿಗೆ ಸೂರು ಒದಗಿಸಲು ಆಗಿಲ್ಲ. ಚನ್ನಡಲು ಗ್ರಾಮದ 16 ಕುಟುಂಬಗಳು ಅಲ್ಲಿಂದ ಸ್ಥಳಾಂತರ ಆಗಲು ಒಪ್ಪಿದ ಕಾರಣಕ್ಕೆ ಕಳಸ ಪಂಚಾಯತಿ ವ್ಯಾಪ್ತಿಯ ಕುಂಬಳಡಿಕೆ ಬಳಿ ಮನೆ ನಿರ್ಮಿಸಿಕೊಳ್ಳಲು ಜಿಲ್ಲಾಡಳಿತ ಸೂಚಿಸಿತ್ತು. ಪರಿಹಾರದ ₹5 ಲಕ್ಷ ಪೈಕಿ ಮೊದಲ ಕಂತಿನ ₹1 ಲಕ್ಷ ಸಂತ್ರಸ್ತರಿಗೆ ಪಾವತಿ ಮಾಡಲಾಗಿತ್ತು. ಆ ನಿವೇಶನದ ಬದಲು ಇಡಕಿಣಿ ಗ್ರಾಮದಲ್ಲೇ ನಿವೇಶನ ಕೊಡಬೇಕು ಎಂದು ಸಂತ್ರಸ್ತರು ಪಟ್ಟು ಹಿಡಿದರು. ಕಳಸದಲ್ಲಿ 2 ವಾರದ ಸತತ ಧರಣಿಯ ನಂತರ ಇಡಕಿಣಿ ಗ್ರಾಮದಲ್ಲಿ 16 ಸಂತ್ರಸ್ತರಿಗೆ ನಿವೇಶನ ಗುರುತು ಮಾಡಲಾಯಿತು. ಅಲ್ಲಿ ಸಂತ್ರಸ್ತರು ಮನೆಗಳಿಗೆ ಅಡಿಪಾಯ ನಿರ್ಮಿಸಿದ ನಂತರ ಅವರ ಮನೆಗೆ ಸರ್ಕಾರದಿಂದ ಅನುದಾನ ಪಾವತಿ ಮಾಡಲು ನಿರಾಕರಿಸಲಾಯಿತು. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಸಂತ್ರಸ್ತರಿಗೆ ಈವರೆಗೂ ಹಕ್ಕುಪತ್ರ ಕೂಡ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿಗೆ ಹಲವಾರು ಬಾರಿ ಸಂತ್ರಸ್ತರು ತೆರಳಿದರೂ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಚನ್ನಡಲಿನ ಶಿಥಿಲಗೊಂಡ ಮನೆಗಳಿಗೆ ಕೆಲವರು ಮರಳಿದರೆ ಉಳಿದವರು ಈಗಲೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ‘4 ವರ್ಷ ಕಳೆದರೂ ನಮಗೆ ಪುನರ್ವಸತಿ ಕಲ್ಪಿಸಲು ತಾಂತ್ರಿಕ ತೊಂದರೆಗಳು ಅಡ್ಡಿ ಆಗಿವೆ. ಪ್ರಧಾನಿಗೆ ಪತ್ರ ಬರೆದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಸಂತ್ರಸ್ತ ಅವಿನಾಶ್ ದುಃಖದಿಂದ ಹೇಳುತ್ತಾರೆ.

ಪುನರ್ವಸತಿಗೆ ಕಾದಿರುವ ಗುಡ್ಡೆತೋಟ ನಿವಾಸಿಗಳು ಕೊಪ್ಪ: ಗುಡ್ಡ ಕುಸಿತದ ಭೀತಿಯಲ್ಲಿರುವ ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆತೋಟ ಗ್ರಾಮದ ಕೆಲವು ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಮಂದಗತಿಯಲ್ಲಿ ಸಾಗಿದೆ. ಕಳೆದ ಎರಡು ವರ್ಷಗಳ ಹಿಂದಿನಿಂದ ಮೇಗುಂದಾ ಹೋಬಳಿ ವ್ಯಾಪ್ತಿಯ ಗುಡ್ಡೆತೋಟದಲ್ಲಿ 17 ಮನೆಗಳು ಅತಿವೃಷ್ಟಿ ಸಂದರ್ಭ ಗುಡ್ಡ ಕುಸಿಯುವ ಆತಂಕದಲ್ಲಿರುವುದನ್ನು ಕಂದಾಯ ಇಲಾಖೆ ಗುರುತಿಸಿದೆ. ಸ್ಥಳೀಯರು ಪುನರ್ವಸತಿಗಾಗಿ ಹಕ್ಕೊತ್ತಾಯವನ್ನೂ ಮಾಡಿದ್ದರು. ಭೈರೇದೇವರು ಗ್ರಾಮದಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಇದ್ದ ಜಾಗವು ಪಹಣಿಯಲ್ಲಿ ‘ಅಭಿವೃದ್ಧಿ ಇಲಾಖೆ’ ಎಂದಿದ್ದು ನಂತರ ಉಪ ವಿಭಾಗಾಧಿಕಾರಿ ಆದೇಶದಂತೆ ‘ಉಚಿತ ನಿವೇಶನ ಹಂಚಿಕೆಗೆ ಅಭಿವೃದ್ಧಿ ಇಲಾಖೆ’ ಎಂಬುದಾಗಿ ಕಂದಾಯ ಇಲಾಖೆಯಿಂದ ತಿದ್ದುಪಡಿ ಮಾಡಿ ಮುಂದಿನ ಕ್ರಮಕ್ಕಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ‘ವಸತಿ ಉದ್ದೇಶಕ್ಕೆ ಬೈರೆದೇವರು ಗ್ರಾಮದಲ್ಲಿನ 189ನೇ ಸರ್ವೆ ನಂಬರ್‌ನಲ್ಲಿ ಭೂಮಿ ಮಂಜೂರಾಗಿದೆ. ಫಲಾನುಭವಿಗಳ ಆಯ್ಕೆ ಸಂದರ್ಭ ಪುನರ್ವಸತಿಗಾಗಿ ಕಾಯುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ನೆಲೆ ಕಳೆದುಕೊಂಡವರ ಬದುಕು ಮೂರಾಬಟ್ಟೆ ಮೂಡಿಗೆರೆ: ತಾಲ್ಲೂಕಿನಲ್ಲಿ 2019ರ ಆಗಸ್ಟ್ 9ರಂದು ಸುರಿದ ಮಹಾಮಳೆಯು ಹಲವರ ಬದುಕನ್ನು ನಾಶ ಮಾಡಿದ್ದು ಮಳೆಯಲ್ಲಿ ನೆಲೆ ಕಳೆದುಕೊಂಡವರ ಬದುಕು ಇಂದಿಗೂ ಮೂರಾಬಟ್ಟೆಯಾಗಿದೆ. ತಾಲ್ಲೂಕಿನಲ್ಲಿ ಮಳೆಗೆ ಹೆಚ್ಚು ಹಾನಿಯಾಗಿದ್ದು ಜಾವಳಿ ಹಾಗೂ ಸುಂಕಸಾಲೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ಮಲೆಮನೆ ಹಾಗೂ ಮಧುಗುಂಡಿ ಗ್ರಾಮಗಳು. ಮಧುಗುಂಡಿಯಲ್ಲಿ ಆರು ಹಾಗೂ ಮಲೆಮನೆಯಲ್ಲಿ ಐದು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದು ಇಂದಿಗೂ ಆ ಹನ್ನೊಂದು ಕುಟುಂಬಗಳಿಗೆ ಸೂರು ಸಿಗದೇ ಪರಿತಪಿಸುವಂತಾಗಿದೆ. ದುರಂತ ಸಂಭವಿಸಿದ ಬಳಿಕ ಗ್ರಾಮಕ್ಕೆ ದೌಡಾಯಿಸಿದ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು ನೀಡಿದ ಭರವಸೆಗಳು ಹುಸಿಯಾಗಿದ್ದು ನಿರಾಶ್ರಿತರು ಹಗಲಿರುಳು ಹೋರಾಟ ನಡೆಸಿದರೂ ಮನೆ ನಿರ್ಮಾಣದ ಕನಸು ಮಾತ್ರ ನನಸಾಗಿಲ್ಲ. ಬಾಡಿಗೆ ಮನೆಗಳಲ್ಲಿ ಕಾಫಿ ತೋಠದ ಲೈನುಗಳಲ್ಲಿ ಜೀವನ ಸಾಗಿಸುವಂತಾಗಿದೆ. ಈ ಭಾಗದಲ್ಲಿ ಮಳೆಯಿಂದ 45 ಎಕರೆಗೂ ಅಧಿಕ ಕಾಫಿ ತೋಟ ಒಂದೇ ದಿನದಲ್ಲಿ ನೆಲಸಮವಾಗಿದ್ದು ಜಮೀನ್ದಾರರಾಗಿದ್ದ ಕುಟುಂಬಗಳು ಇಂದು ಕೂಲಿ ಮಾಡಿ ಜೀವನ ನಡೆಸುವಂತಾಗಿದೆ. ‘ಮಳೆಯು ನಮ್ಮ ಜೀವನವನ್ನೇ ಕಸಿದುಕೊಂಡಿತು. ಒಂದೇ ರಾತ್ರಿಯಲ್ಲಿ ಮನೆ ಜಮೀನನ್ನು ಕಳೆದುಕೊಂಡು ಬೀದಿಗೆ ಬರುವಂತಾಯಿತು. ಅಂದಿನ ದಿನವನ್ನು ನೆನಪಿಸಿಕೊಳ್ಳಲೂ ಅಸಾಧ್ಯವಾಗುತ್ತದೆ. ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರಗಳಿಗೆ ಬಂದ ನಮಗೆ ಹೊಸ ಜಾಗದಲ್ಲಿ ಮನೆ ಜಮೀನು ನೀಡುವ ಭರವಸೆಗಳನ್ನು ನೀಡಲಾಗಿತ್ತು. 9 ತಿಂಗಳ ಮನೆ ಬಾಡಿಗೆ ನೀಡುವ ಭರವಸೆಯನ್ನು ನೀಡಿ ನಿರಾಶ್ರಿತರ ಕೇಂದ್ರದಿಂದ ಹೊರ ಹಾಕಲಾಯಿತು. ಆದರೆ ಇದುವರೆಗೂ ನಯಾ ಪೈಸೆಯನ್ನೂ ಮನೆ ಬಾಡಿಗೆಯೆಂದು ನೀಡಲಿಲ್ಲ’ ಎಂದು ಅವರು ಗೋಳು ಹೇಳಿಕೊಳ್ಳುತ್ತಾರೆ. ‘ನೆಲೆ ಕಳೆದುಕೊಂಡ ನಮಗೆ ಇದುವರೆಗೂ ಮನೆ ಜಮೀನನ್ನು ಕೊಡುವ ಕೆಲಸ ಮಾಡಲಿಲ್ಲ. ಇಂದು ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಪ್ರತಿಭಟನೆ ಹೋರಾಟ ನಡೆಸಿದಾಗ ಭರವಸೆ ನೀಡುವ ಅಧಿಕಾರಿಗಳು ಬಳಿಕ ಮಾತೇ ಆಡುವುದಿಲ್ಲ. ನಮಗೆ ಬಂದ ಕಷ್ಟ ಬೇರೆ ಯಾರಿಗೂ ಬರಬಾರದು’ ಎಂದು ಕಣ್ಣೀರಿಡುತ್ತಾರೆ ಮಧುಗುಂಡಿಯ ರೇವತಿ. ಮಳೆಯಿಂದ ಕಸ್ಕೇಬೈಲ್ ಆಲೇಖಾನ್ ಹೊರಟ್ಟಿ ಭಾಗಗಳಲ್ಲೂ ಹಾನಿಯಾಗಿದ್ದು ಪರಿಹಾರ ವಿತರಣೆಯಲ್ಲೂ ಲೋಪಗಳುಂಟಾಗಿವೆ ಎಂಬ ಆರೋಪಗಳಿವೆ. ‘ಸಿ ವರ್ಗದ ಮನೆಗಳಿಗೆ 2ನೇ ಕಂತಿನ ಹಣ ಬಿಡುಗಡೆ ಮಾಡದೇ ನಿರಾಶ್ರಿತರನ್ನು ಇಂದಿಗೂ ಅಲೆದಾಡಿಸುತ್ತಿದ್ದು ಪರಿಹಾರ ವಿತರಣೆಯ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂಬುದು ನಿರಾಶ್ರಿತರ ಒತ್ತಾಯವಾಗಿದೆ.

ಅಂಕಿ–ಅಂಶ 16 ಕುಟುಂಬ ಕಳಸ ತಾಲ್ಲೂಕಿನ ಚನ್ನಡಲು ಗ್ರಾಮದ ಸಂತಸ್ತ್ರರು 11 ಕುಟುಂಬ ಮೂಡಿಗೆರೆ ತಾಲ್ಲೂಕಿನ ಸಂತ್ರಸ್ತರು 17 ಕುಟುಂಬ ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಲ್ಲಿ ಮನೆ ಕುಸಿಯುವ ಆತಂಕದಲ್ಲಿರುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.