ಕಡೂರು: ಶುಂಠಿ ಬೆಳೆಗೆ ಬಂಪರ್ ಬೆಲೆ ಬರುತ್ತಿದ್ದಂತೆ ಸಖರಾಯಪಟ್ಟಣ ಭಾಗದ ರೈತರು ಶುಂಠಿ ಬೆಳೆಯತ್ತ ಗಮನ ಹರಿಸಿದ್ದಾರೆ. ಇದರ ಬೆನ್ನಲ್ಲೇ ಬೀಜದ ಶುಂಠಿಯ ಬೆಲೆಯೂ ಗಗನಮುಖಿಯಾಗಿದೆ.
ಶುಂಠಿ ಬೆಳೆಯಲು ಮರಳು ಮಿಶ್ರಿತ,ನೀರು ಬಸಿದುಹೊಗುವ ಭೂಮಿ ಅಗತ್ಯವಿದೆ. ಮಲೆನಾಡು ಭಾಗದಲ್ಲಿ ಶುಂಠಿಗೆ ರೋಗಬಾಧೆ ಹೆಚ್ಚು. ಬಯಲು ಸೀಮೆಯಲ್ಲಿ ಇಳುವರಿ ಕಡಿಮೆ. ಅರೆ ಮಲೆನಾಡು ಪ್ರದೇಶ ಈ ಬೆಳೆಗೆ ಸೂಕ್ತ. ಒಂದು ಹೆಕ್ಟೇರ್‌ನಲ್ಲಿ 20 ರಿಂದ 23 ಟನ್ ಇಳುವರಿ ಪಡೆಯಬಹುದಾಗಿದೆ. 1 ಕೆ.ಜಿ.ಬೀಜಕ್ಕೆ 10 ಕೆ.ಜಿ.ನಿರೀಕ್ಷಿತ ಇಳುವರಿಯಿದೆ. ಒಂದು ಕ್ವಿಂಟಲ್ ಹಸಿ ಶುಂಠಿಯಿಂದ 18 ರಿಂದ 20 ಕೆ.ಜಿಯಷ್ಟು ಒಣಶುಂಠಿ ಪಡೆಯಬಹುದಾಗಿದೆ.
ಕಡೂರು ಪ್ರದೇಶದಲ್ಲಿ ಕಪ್ಪು ಮತ್ತು ಕೆಂಪು ಮಣ್ಣು ಹೆಚ್ಚಿರುವ ಭೂಪ್ರದೇಶವಿದೆ. ಕೆಲವು ರೈತರು ತಾವೇ ಶುಂಠಿ ಬೆಳೆದು ಲಾಭಗಳಿಸಿದ್ದಾರೆ. ಮತ್ತೆ ಕೆಲವರು ಶುಂಠಿ ಬೆಳೆಯಲು ಜಮೀನನ್ನು ಗುತ್ತಿಗೆ ನೀಡಿದ್ದಾರೆ. ಈ ಬಾರಿ ಸಖರಾಯಪಟ್ಟಣ ಹೋಬಳಿಯಲ್ಲಿ ಹೆಚ್ಚಿನ ರೈತರು ಶುಂಠಿ ಬಿತ್ತನೆ ಮಾಡಿದ್ದಾರೆ. 500ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಶುಂಠಿ ನಾಟಿ ಮಾಡಲಾಗಿದ್ದು, ಬೆಳವಣಿಗೆ ಹಂತದಲ್ಲಿವೆ. ಕಸಬಾ ಹೋಬಳಿಯಲ್ಲೂ ಕೆಲವರು ಸಣ್ಣ ಪ್ರಮಾಣದಲ್ಲಿ ಶುಂಠಿ ನಾಟಿ ಮಾಡಿದ್ದಾರೆ.
ಬೀಜದ ಶುಂಠಿಯನ್ನು ರೈತರು ಹಾಸನದಿಂದ ತರುತ್ತಾರೆ. ಪ್ರಸ್ತುತ ಬೀಜದ ಶುಂಠಿ ಬೆಲೆ 60 ಕೆ.ಜಿ ತೂಕದ ಚೀಲಕ್ಕೆ ₹18 ಸಾವಿರ ಇದೆ. ಹಸಿ ಶುಂಠಿಗೆ ಸದ್ಯ ₹200 ರಿಂದ ₹250 ದರ ಇದೆ. ರೈತರು ಶುಂಠಿ ಮಾರಾಟಕ್ಕಾಗಿ ಹಾಸನ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ.
ಸಖರಾಯಪಟ್ಟಣ ಹೋಬಳಿ ಅರೆಮಲೆನಾಡು ಭಾಗವಾಗಿದ್ದರೂ ಹವಾಮಾನ ಮಲೆನಾಡಿನಂತೆಯೇ ಇರುತ್ತದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆ. ಅದರ ಜೊತೆಗೆ ಶುಂಠಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈಗಿರುವ ಬೆಲೆಯೇ ಸ್ಥಿರವಾಗಿದ್ದಲ್ಲಿ ರೈತರಿಗೆ ಬಂಪರ್ ಲಾಭ ಬರುವ ನಿರೀಕ್ಷೆಯಿದೆ.
ಶುಂಠಿ ಬೆಳೆಯಲ್ಲಿ ಗೊಬ್ಬರದ್ದೇ ಅಧಿಕ ಪ್ರಮಾಣದ ಖರ್ಚು. ಸಾವಯವ ವಿಧಾನದಲ್ಲಿ ಬೆಳೆದರೆ ಖರ್ಚು ಕಡಿಮೆಯಾಗುತ್ತದೆ.ಇಳುವರಿಯೂ ಗಣನೀಯ ಪ್ರಮಾಣದಲ್ಲಿರುತ್ತದೆ.ಸೋಮಶೇಖರಪ್ಪ. ಮಲ್ಲಪ್ಪನಹಳ್ಳಿ
ಸಾವಯವ ಪದ್ಧತಿ ಉತ್ತಮ ಶುಂಠಿ ಬೆಳೆ ಹೆಚ್ಚು ಗೊಬ್ಬರ ಬಯಸುವ ಬೆಳೆ. ರೈತರು ಇಳುವರಿ ಹೆಚ್ಚು ಬರಬೇಕೆಂದು ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಇದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಮ್ಮೆ ಶುಂಠಿ ಬೆಳೆದ ನಂತರ ಅದೇ ಜಾಗದಲ್ಲಿ ಬೇರೆ ಬೆಳೆ ಚೆನ್ನಾಗಿ ಬಾರದು. ಆದರೆ ರೈತರು ರಾಸಾಯನಿಕ ಬಳಕೆ ಕಡಿಮೆ ಮಾಡಿ ಸಾಂಪ್ರದಾಯಿಕವಾಗಿ ಸಾವಯವ ಪದ್ಧತಿಯಲ್ಲಿ ಬೆಳೆದರೆ ಮುಂದಿನ ಬೆಳೆಯಲ್ಲೂ ಉತ್ತಮ ಇಳುವರಿ ಪಡೆಯಬಹುದು. ರೈತರು ಇದರತ್ತ ಗಮನ ಹರಿಸಬೇಕು. ಶುಂಠಿ ಬೆಳೆಯ ಇಲಾಖೆಯನ್ನು ಸಂಪರ್ಕಿಸಿ ರೈತರು ಮಾಹಿತಿ ಪಡೆಯಬೇಕು ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಯದೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.