ADVERTISEMENT

ಚಿಕ್ಕಮಗಳೂರು: ಆಮೆಗತಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 8:04 IST
Last Updated 12 ಡಿಸೆಂಬರ್ 2023, 8:04 IST
ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿರುವುದು
ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿರುವುದು   

ಚಿಕ್ಕಮಗಳೂರು: ಸ್ಮಾರ್ಟ್ ಸಿಟಿಯ ಕನಸು ಹೊತ್ತಿರುವ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಗರ ಬಡಿದಿದೆ. ಅನುದಾನ ಕೊರತೆ, ಗುತ್ತಿಗೆದಾರರ ಸಮಸ್ಯೆ ಮೊದಲಾದ ಕಾರಣದಿಂದಾಗಿ ಹಲವು ಕಾಮಗಾರಿಗಳು ಕುಂಠಿತವಾಗಿ ಆಮೆಗತಿಯಲ್ಲಿ ಸಾಗುತ್ತಿವೆ.

ನಗರದ ಕೆ.ಎಂ. ರಸ್ತೆಯ ತೋಟಗಾರಿಕೆ ಇಲಾಖೆ ಬಳಿ ₹30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣವಾಗುತ್ತಿದೆ. ಸಾರ್ವಜನಿಕರು, ರೈತರು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಈ ಹಿಂದೆ ಕಂದಾಯ ಸಚಿವರಾಗಿದ್ದ ಆರ್‌.ಅಶೋಕ ಭೂಮಿಪೂಜೆ ನೆರವೇರಿಸಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಅವಧಿಯಲ್ಲಿ ಬಿಡುಗಡೆಯಾಗಿದ್ದ ರಾಜ್ಯದ ಕೆಲ ಕಾಮಗಾರಿಗಳ ಅನುದಾನ ತಡೆಹಿಡಿದಿತ್ತು. ಅನುದಾನ ಬಿಡುಗಡೆ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆ, ಕೆರೆ ಅಭಿವೃದ್ಧಿ, ಮೆಡಿಕಲ್ ಕಾಲೇಜು ನಿರ್ಮಾಣ ಸಹಿತ ಮೊದಲಾದ ಕಾಮಗಾರಿಗಳು ಕುಂಟುತ್ತಾ ಸಾಗಿವೆ.

ADVERTISEMENT

ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ಕಾಮಗಾರಿ 2023 ಮಾರ್ಚ್‌ನಿಂದ ಆರಂಭವಾಗಿದೆ. ಒಟ್ಟು ಮೂರು ಅಂತಸ್ತುಗಳನ್ನು ಹೊಂದಿದ್ದು ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪ್ರವಾಸೋದ್ಯಮ, ಸರ್ವೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ, ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಸೇರಿ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ.

ಈಗಾಗಲೇ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಅಂತಸ್ತಿನ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ. 18 ತಿಂಗಳ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗವಿರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಹಲವು ಕಾರಣದಿಂದ ಸ್ಥಗಿತಗೊಂಡಿದೆ. ಹೆದ್ದಾರಿ ವಿಸ್ತರಣೆ ನೆಪದಲ್ಲಿ ಕೆರೆ ಒತ್ತುವರಿ, ಮೂಲಸ್ವರೂಪಕ್ಕೆ ಧಕ್ಕೆ, ಹಣದ ದುರ್ಬಳಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌.ಭೋಜೇಗೌಡ ಸದನದಲ್ಲಿ ಪ್ರಶ್ನಿಸಿದ್ದರು. ಸಮಿತಿ ರಚಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ತನಿಖೆಗೆ ಆಗ್ರಹಿಸಿದ್ದರು. ಹೂಳೆತ್ತಿದ್ದ ಕೆರೆ ಕಾಮಗಾರಿ ಈಗ ಅರ್ಧಕ್ಕೆ ನಿಂತು ಪಾಳು ಬಿದ್ದ ಕೆರೆಯಂತಾಗಿದೆ.

ಬಸವನಹಳ್ಳಿ ಕೆರೆ ಕಾಮಗಾರಿ ಅಭಿವೃದ್ಧಿಯ ನೀಲಿನಕ್ಷೆ ರಚಿಸಿ ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ವಹಿಸಲಾಗಿದೆ. ಸದ್ಯ ಕೆರೆ ಅಭಿವೃದ್ಧಿ ಅನುದಾನ ವಿಚಾರಣೆ ಹಂತದಲ್ಲಿರುವುದರಿಂದ ಗುತ್ತಿಗೆದಾರರಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಕೆರೆ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಾಜಿ ಶಾಸಕ ಸಿ.ಟಿ. ರವಿ ಮಾತನಾಡಿ, ‘ಬಿಜೆಪಿ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದಿನ ಕಾಮಗಾರಿಯ ಗುತ್ತಿಗೆದಾರರಿಗೆ ಆರೇಳು ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ಜಿಲ್ಲೆಯಲ್ಲಿ ನೀರಾವರಿ, ಕೆರೆ ಅಭಿವೃದ್ಧಿ, ಮೆಡಿಕಲ್ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಾಣ ಸಹಿತ ಮೊದಲಾದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿವೆ. ಬಸನಹಳ್ಳಿ ಕೆರೆ ಅಭಿವೃದ್ಧಿ ವಿಷಯದಲ್ಲಿ ಕೆಲವರು ಸಣ್ಣತನದ ರಾಜಕಾರಣದಿಂದ ಅವ್ಯವಹಾರದ ಆರೋಪ ಹೊರಿಸಿದ್ದರು’ ಎಂದು ಹೇಳಿದರು.

ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡ ಕಾಮಗಾರಿ
ಹೊಸ ಸರ್ಕಾರ ಬಂದ ಬಳಿಕ ಜಿಲ್ಲೆಗೆ ಯಾವುದೇ ಕಾಮಗಾರಿ ಮಂಜೂರಾಗಿಲ್ಲ. ಸರ್ಕಾರ ಆರೇಳು ತಿಂಗಳಿನಿಂದ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡಿದೆ. ಹಾಗಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿವೆ. ಸುಸ್ಥಿರ ಅಭಿವೃದ್ಧಿ ಸರ್ಕಾರದ ಮುಖ್ಯ ಧ್ಯೇಯವಾಗಬೇಕು.
ಸಿ.ಟಿ.ರವಿ ಮಾಜಿ ಶಾಸಕ
ಪೂರ್ಣಗೊಳ್ಳದ ನೀರಾವರಿ ಯೋಜನೆಗಳು
ಕೃಷಿ ಚಟುವಟಿಕೆ ಹಾಗೂ ನೀರಿನ ಭವಣೆ ತಪ್ಪಿಸಲು ತಾಲ್ಲೂಕಿನ ಕೆರೆಗಳಿಗೆ ನೀರೊದಗಿಸುವ ಮಳಲೂರು ಕರಗಡ ಭದ್ರಾ ಉಪಕಣಿವೆ ಸಹಿತ ಹಲವು ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ಅನುದಾನ ಕೊರೆತೆಯಿಂದ ಅನೇಕ ವರ್ಷ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಜಿಲ್ಲೆಯಲ್ಲಿ ಬರಗಾಲದ ಸ್ಥಿತಿ ಇದ್ದು ಸರ್ಕಾರ ವಿಳಂಬ ನೀತಿ ಅನುಸರಿಸದೆ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.