ಚಿಕ್ಕಮಗಳೂರು: ಅರಣ್ಯದಿಂದ ಹೊರ ಬರಲು ಒಪ್ಪಿದ್ದರೂ ಈ 16 ಕುಟುಂಬಗಳ ಸ್ಥಳಾಂತರವಾಗಿಲ್ಲ. ಅಷ್ಟೂ ಕುಟುಂಬಗಳನ್ನು ಅರಣ್ಯದೊಳಗೆ ಬಿಟ್ಟು ಸುತ್ತ ಸೋಲಾರ್ ಆಧಾರಿತ ಟೆಂಟಕಲ್ ಬೇಲಿ ನಿರ್ಮಿಸಲಾಗಿದ್ದು, ಆನೆ, ಹುಲಿ, ಕಾಡುಕೋಣಗಳ ಜತೆಯಲ್ಲೇ ಈ ಕುಟುಂಬಗಳೂ ಜೀವಭಯದಲ್ಲಿ ನೆಲೆಸಿವೆ.
2006–07ನೇ ಸಾಲಿನಿಂದ ಸರ್ಕಾರ ಮತ್ತು ನಿವಾಸಿಗಳ ನಡುವೆ ನಡೆಯುತ್ತಿರುವ ಪುನರ್ವಸತಿ ಪ್ರಹಸನ ಅಂತ್ಯ ಕಂಡೇ ಇಲ್ಲ. ತಲಾ ಎರಡು ಎಕರೆಯಂತೆ ಒಟ್ಟು 32 ಎಕರೆ ಕಂದಾಯ ಜಾಗ ಗುರುತಿಸಿ ಸ್ಥಳಾಂತರ ಮಾಡಲು ಆಗಿಲ್ಲ. ಇದರಂದಾಗಿ ಕುಟುಂಬಗಳು ಕಾಡಿನಲ್ಲೇ ಉಳಿದಿದ್ದು, ಕಾಡಿನಿಂದ ಹೊರತನ್ನಿ ಎಂಬ ಅವರ ಕೂಗು ಅಕ್ಷರಶಃ ಅರಣ್ಯ ರೋದನವಾಗಿದೆ.
ಸಾರಗೋಡು ಮೀಸಲು ಅರಣ್ಯ ಘೋಷಣೆ ಸಂದರ್ಭದಲ್ಲಿ ಮಂಡುಗುಳಿಹಾರ ಮತ್ತು ಬೈರಿಗದ್ದೆ ಸುತ್ತಮುತ್ತಲ 70ಕ್ಕೂ ಹೆಚ್ಚು ಕುಟುಂಬಗಳನ್ನು 2006ರಲ್ಲೇ ಸ್ಥಳಾಂತರ ಮಾಡಲಾಗಿದೆ. 1978ಕ್ಕೂ ಪೂರ್ವದಿಂದ ನೆಲೆಸಿರುವ ಕುಟುಂಬಗಳು ಎಂಬ ಕಾರಣಕ್ಕೆ ಪಾರಂಪರಿಕ ಅರಣ್ಯವಾಸಿಗಳು ಎಂದು ತೀರ್ಮಾನಿಸಿ 16 ಕುಟುಂಬಗಳನ್ನು ಇಲ್ಲೇ ಉಳಿಸಲಾಯಿತು.
ಕಾಡು ಹೆಚ್ಚಾದಂತೆ ವನ್ಯಜೀವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆನೆ, ಹುಲಿ, ಕಾಡುಕೋಣಗಳು ಮನೆಗಳ ಹತ್ತಿರಕ್ಕೇ ಬಂದು ಹೋಗುತ್ತಿವೆ. ಆನೆಗಳು ಅರಣ್ಯ ದಾಟಿ ಊರಿನತ್ತ ಬರದಂತೆ ಸೋಲಾರ್ ಆಧಾರಿತ ಟೆಂಟಕಲ್ ಬೇಲಿಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. 16 ಕುಟುಂಬಗಳು ಈ ಬೇಲಿಯೊಳಗೆ ಉಳಿದುಕೊಂಡಿವೆ. ಅಷ್ಟೂ ಮನೆಗಳು ಕಾಡಿನಲ್ಲಿ ಒಂದೇ ಕಡೆ ಇಲ್ಲ. ಮಧ್ಯದಲ್ಲಿ ಅಲ್ಲೊಂದು, ಇಲ್ಲೊಂದು ಎಂಬಂತಿವೆ. ಊರಿನ ಸಂಪರ್ಕ ರಸ್ತೆಗೆ ಬರಬೇಕೆಂದರೆ ಕನಿಷ್ಠ ಮೂರು ಕಿಲೋ ಮೀಟರ್ ನಡೆದು ಸಾಗಬೇಕು. ಆ ನಂತರ ಟೆಂಟಕಲ್ ಬೇಲಿ ದಾಟಿ ರಸ್ತೆಗೆ ಬರಬೇಕು. ಈ ಬೇಲಿ ದಾಟುವಾಗ ವಿದ್ಯುತ್ ತಗುಲಿದರೆ, ಜೀವಕ್ಕೆ ಅಪಾಯ ಇಲ್ಲ. ಆದರೆ, ಸುಧಾರಿಸಿಕೊಳ್ಳಲು ಒಂದು ವಾರವಾದರೂ ಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಕಾಡಿನೊಳಗೆ ಉಳಿದಿರುವುದರಿಂದ ಆನೆ ಮತ್ತು ಹುಲಿಗಳು ಮನೆಯ ಮುಂದೆಯೇ ಬಂದು ಹೋಗುತ್ತಿವೆ. ಜೀವಭಯದಿಂದ ವಯೋವೃದ್ಧರು ಮನೆಯಿಂದ ಹೊರಗೆ ಬರುತ್ತಿಲ್ಲ. ಯುವಕರು ಮಾತ್ರ ಹಳ್ಳಿಗಳಿಗೆ ಹೋಗಿ ಮನೆಗೆ ಬೇಕಿರುವ ವಸ್ತುಗಳನ್ನು ಖರೀದಿಸಿಕೊಂಡು ಬರುತ್ತಾರೆ.
‘ಮನೆಗೆ ಹೋಗುವ ದಾರಿಯಲ್ಲಿ ಹಲವು ಬಾರಿ ಆನೆ ಅಟ್ಟಾಡಿಸಿವೆ. ತಪ್ಪಿಸಿಕೊಂಡು ಓಡಿದ್ದರಿಂದ ಜೀವ ಉಳಿದಿದೆ. ನಮ್ಮ ಕಣ್ಣೆದುರೇ ಇಬ್ಬರ ಪ್ರಾಣ ಹೋಗಿದೆ. ಮಗನಿಗೆ ಈಗ ನಾಲ್ಕು ವರ್ಷ ಪೂರ್ಣಗೊಂಡಿದೆ. ಅಂಗನವಾಡಿಗೆ ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಜೀವ ಉಳಿದರೆ ಸಾಕು ಎನ್ನುವಂತಾಗಿದೆ’ ಎಂದು ಮುಂಡಗುಳಿಹಾರದ ಕಾರ್ತಿಕ್ ಹೇಳಿದರು.
‘ನಮ್ಮನ್ನು ಕಾಡಿನಲ್ಲಿ ಬಿಟ್ಟು ಸುತ್ತಲೂ ಸೋಲಾರ್ ಬೇಲಿ ಹಾಕಲಾಗಿದೆ. ಆನೆ, ಹುಲಿ, ಕಾಡುಕೋಣ ಮತ್ತು ನಮ್ಮನ್ನು ಒಟ್ಟಿಗೆ ಕೂಡಿ ಹಾಕಲಾಗಿದೆ. ನಾವು ಈ ನಾಗರಿಕ ಸಮಾಜದ ಭಾಗ ಅಲ್ಲ ಎಂಬ ಭಾವನೆ ಮೂಡಿದೆ. ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗುವ ಮುನ್ನ ನಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡಿ’ ಎಂದು ಎಂದು ನಿವಾಸಿಗಳು ಮನವಿ ಮಾಡಿಕೊಂಡರು.
ಸರ್ಕಾರದ ಮುಂದಿದೆ ಪ್ರಸ್ತಾವ
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಇಡಗುಣಿ ಗ್ರಾಮದ ಸರ್ವೆ ನಂಬರ್ 21ರಲ್ಲಿ 16 ಕುಟುಂಬಗಳಿಗೆ ತಲಾ ಎರಡು ಎಕರೆ ಜಾಗ ಮತ್ತು ಮನೆ ನಿರ್ಮಾಣ ಮಾಡಿಕೊಳ್ಳಲು 4 ಗುಂಟೆ ಜಾಗ ಗುರುತಿಸಲಾಗಿದೆ. ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದವರು ಬೆಳೆಸಿರುವ ಕಾಫಿ ತೋಟ ಹಾಗೇ ಉಳಿಸಿದ್ದು ಆ ತೋಟಗಳನ್ನೇ ಸಾರಗೋಡು ನಿವಾಸಿಗಳಿಗೆ ಹಸ್ತಾಂತರಿಸಲು ಸಿದ್ಧತೆಯನ್ನು ಈ ಹಿಂದಿನ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಮಾಡಿದ್ದರು. ಈ ಪ್ರಸ್ತಾವ ಈಗ ಸರ್ಕಾರದ ಮುಂದಿದೆ. ಈ ಸರ್ವೆ ನಂಬರ್‌ನಲ್ಲಿ ಒಟ್ಟು 36 ಎಕರೆ ಜಾಗ ಲಭ್ಯವಿದ್ದು ರಸ್ತೆ ಅಂಗನವಾಡಿಗೆ ಜಾಗ ಮೀಸಲಿಡಲಾಗುತ್ತಿದೆ. ಕುಡಿಯುವ ನೀರು ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಸಚಿವ ಸಂಪುಟದ ಮುಂದೆ ಮಂಡನೆಯಾಗಿ ಅನುಮೋದನೆ ದೊರೆತರೆ ಸ್ಥಳಾಂತರ ಆಗಲಿದೆ ಎಂಬುದು ಜಿಲ್ಲಾಡಳಿತದ ಮೂಲಗಳು ನೀಡುವ ಮಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.