ಚಿಕ್ಕಮಗಳೂರು: ಕಾಫಿ ತೋಟಕ್ಕೂ ವಿಸ್ತರಿಸಿರುವ ರಿಯಲ್ ಎಸ್ಟೇಟ್‌ಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. 5 ಎಕರೆಗೂ ಕಡಿಮೆ ವಿಸ್ತೀರ್ಣದ ಪ್ಲಾಂಟೇಷನ್ ಜಮೀನು ಹಿಸ್ಸೆಗಳಾಗಿ ವಿಂಗಡಿಸುವುದನ್ನು ನಿರ್ಬಂಧಿಸಿದೆ. ಇದು ಪರಿಸರದ ದೃಷ್ಟಿಯಿಂದ ಉತ್ತಮ ನಿರ್ಧಾರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆಯಿಂದ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ರೀತಿಯ ತೋಟಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕಡಿಮೆ ಬೆಲೆಗೆ ಖರೀದಿಸಿ ತುಂಡು ಭೂಮಿಯಾಗಿ ವಿಭಾಗಿಸಿ ಮಾರಾಟ ಮಾಡುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಎರಡು ದಶಕಗಳ ಹಿಂದೆಯೇ ಈ ಬೆಳವಣಿಗೆ ಆರಂಭವಾಗಿದೆ. ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಸಣ್ಣ ಹೂಡಿಕೆದಾರರು ಕಾಫಿನಾಡಿನಲ್ಲಿ ಜಮೀನು ಖರೀದಿ ಮಾಡುವುದು ಹೆಚ್ಚಾಗಿದೆ. ಇದೇ ರೀತಿ ಮುಂದುವರಿದರೆ ಇನ್ನು ಹತ್ತು– ಹದಿನೈದು ವರ್ಷಗಳಲ್ಲಿ ಶೇ 15ರಿಂದ 20ರಷ್ಟು ಮಾತ್ರ ಕಾಫಿ ತೋಟಗಳು ಉಳಿಯಲಿದ್ದು, ಉಳಿದ ಭೂಮಿಯಲ್ಲಿ ರೆಸಾರ್ಟ್, ಹೋಮ್ ಸ್ಟೇ, ವಿಲ್ಲಾಗಳು ತಲೆ ಎತ್ತುವ ಸಾಧ್ಯತೆ ಇದೆ ಎನ್ನುತ್ತಾರೆ ಪರಿಸರವಾದಿಗಳು.
ಇದರಿಂದಾಗಿ ಭೂಕುಸಿತಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಒಂದೇ ಸರ್ವೆ ನಂಬರ್‌ನಲ್ಲಿ 5 ಎಕರೆಗಿಂತ ಭೂವಿಭಜನೆ ಮಾನ್ಯ ಮಾಡದಿರಲು ನಿರ್ಧರಿಸಿದೆ. ಪರಿಸರ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಗಳು ತಲೆ ಎತ್ತುವುದನ್ನು ತಡೆಯಲು ಇದು ಒಳ್ಳೆಯ ನಿರ್ಧಾರ ಎಂದು ಅವರು ಹೇಳುತ್ತಾರೆ.
ಆದರೆ, ರೈತರು ಇದರಿಂದ ಕೆಲವು ತೊಂದರೆಗಳನ್ನೂ ಅನುಭವಿಸುವ ಸಾಧ್ಯತೆ ಇದೆ. ಕೈಗಾರಿಕಾ ಕಾಯ್ದೆ ವ್ಯಾಪ್ತಿಯಲ್ಲಿರುವ ಕಾಫಿ ತೋಟಗಳು ಸರ್ಫೇಸಿ ಕಾಯ್ದೆ ವ್ಯಾಪ್ತಿಯಲ್ಲಿವೆ. ಸಾಲ ನೀಡಿರುವ ಬ್ಯಾಂಕ್‌ಗಳು ಜಮೀನು ಹರಾಜು ಪ್ರಕ್ರಿಯೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಒಂದೆರಡು ಎಕರೆ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸಿ ಬಾಕಿ ಜಮೀನು ಉಳಿಸಿಕೊಳ್ಳಲು ರೈತರಿಗೆ ಅವಕಾಶ ಇತ್ತು. ಆದರೆ, ಮುಂದಿನ ದಿನಗಳಲ್ಲಿ ಈ ರೀತಿಯ ರೈತರಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯಗಳೂ ಬೆಳೆಗಾರರಿಂದ ವ್ಯಕ್ತವಾಗುತ್ತಿದೆ.
‘ರೆಸಾರ್ಟ್ ಮತ್ತು ಹೋಮ್‌ಸ್ಟೇಗಳು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿವೆ. ಅದರ ಮೇಲೂ ಪರಿಣಾಮ ಬೀರಲಿದ್ದು, ಪ್ರವಾಸೋದ್ಯಮಕ್ಕೆ ತೊಂದರೆಯಾಗಲಿದೆ. 5 ಎಕರೆ ಬದಲಿಗೆ 3 ಎಕರೆಗೆ ಮಿತಿಗೊಳಿಸಬೇಕಿತ್ತು’ ಎಂಬುದು ರೆಸಾರ್ಟ್ ಮಾಲೀಕರ ಅಭಿಪ್ರಾಯ.
ಕಾಫಿ ತೋಟಗಳನ್ನು ತುಂಡು ಭೂಮಿಯಾಗಿ ಪರಿವರ್ತಿಸಿದರೆ ಕಾಫಿ ತೋಟಗಳ ಸ್ವರೂಪವೇ ಉಳಿಯುವುದಿಲ್ಲ. ಕೃಷಿ ಮತ್ತು ಪರಿಸರದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ. ಇದನ್ನು ಯಾವುದೇ ಕಾರಣಕ್ಕೆ ಹಿಂಪಡೆಯಬಾರದುಡಿ.ವಿ.ಗಿರೀಶ್ ಪರಿಸರವಾದಿ
ಕಾಫಿ ತೋಟಗಳನ್ನು ತುಂಡು ಭೂಮಿಯಾಗಿ ವಿಭಾಗಿಸುವುದನ್ನು ತಡೆಯುವ ಈ ನಿರ್ಧಾರ ಸರಿಯಾಗಿದೆ. ರೈತರಿಗೆ ತೊಂದರೆ ಆಗುವುದಿಲ್ಲ. ಕಾಫಿ ತೋಟಗಳಲ್ಲಿ ಬೇರೆ ಉದ್ಯಮ ಮಾಡಲು ಉದ್ದೇಶದಿಂದ ಬರುವವರಿಗೆ ತೊಂದರೆಯಾಲಿದೆಹೊಲದಗದ್ದೆ ಗಿರೀಶ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ
ನಮ್ಮ ಕಾಫಿ ತೋಟಗಳು ಸಣ್ಣ ಬೆಳೆಗಾರರ ಬಳಿ ಉಳಿಯಬೇಕೆಂದರೆ ಸರ್ಕಾರದ ಅದೇಶ ಸರಿಯಾಗಿದೆ. ಕಾಫಿತೋಟ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದು ತಪ್ಪಲಿದೆ. ಕಾಫಿ ಸಂಸ್ಕೃತಿ ಉಳಿಯಲಿದೆಸ.ಗಿರಿಜಾ ಶಂಕರ್ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ
ಪರಿಸರಕ್ಕೆ ಪೂರಕ: ರೈತರಿಗೆ ಸ್ವಲ್ಪ ಮಾರಕ
ಪರಿಸರ ಮತ್ತು ಕೃಷಿ ದೃಷ್ಟಿಯಿಂದ ಒಳ್ಳೆಯ ನಿರ್ಧಾರ. ನಿಜವಾಗಿ ತೊಂದರೆಗೆ ಸಿಲುಕಿರುವ ರೈತರು ಕೊಂಚ ಅನಾನುಕೂಲ ಆಗಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್‌ಕುಮಾರ್ ಹೇಳಿದರು. ಬ್ಯಾಂಕ್ ಸಾಲ ಮರುಪಾವತಿ ಸಾಧ್ಯವಾಗದೆ ಹರಾಜಿಗೆ ಬಂದಾಗ ಸ್ವಲ್ಪ ಜಮೀನು ಮಾರಾಟ ಮಾಡಿ ಬಾಕಿ ಜಮೀನು ಉಳಿಸಿಕೊಳ್ಳಲು ಅವಕಾಶ ಇತ್ತು. ಈಗ ಕಷ್ಟವಾಗಲಿದೆ ಎಂದು ತಿಳಿಸಿದರು. ಇನ್ನೂ ಪೋಡಿಯಾಗದ ಜಮೀನಿನಲ್ಲಿ ಗಡಿ ಗುರುತಿರುವುದಿಲ್ಲ. ಆ ಸಂದರ್ಭದಲ್ಲಿ ಪಕ್ಕದ ಜಮೀನಿನವರ ಜಾಗದಲ್ಲಿ ಪೈಪ್‌ಲೈನ್ ರೀತಿಯ ಬೇರೆ ಕಾಮಗಾರಿ ಕೈಗೊಂಡಿದ್ದರೆ ಅದನ್ನು ಅವರಿಂದ ಖರೀದಿಸಿಕೊಳ್ಳಲು ಅವಕಾಶ ಇತ್ತು. ಅದರೆ ಈಗ 5 ಎಕರೆ ಮಿತಿ ನಿಗದಿ ಮಾಡಿರುವುದರಿಂದ ಕಷ್ಟವಾಗಲಿದೆ. ಈ ಎರಡು ಸಂದರ್ಭಗಳಲ್ಲಿ ಸರ್ಕಾರ ವಿನಾಯಿತಿ ನೀಡಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.