ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಧನಸಹಾಯ ನೆರವಿನ ಹಸ್ತ ಚಾಚಿದ್ದಾರೆ. ಈ ನಡುವೆ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಅದ್ಧೂರಿ ಮತ್ತು ವೆಚ್ಚಕ್ಕೆ ಲಗಾಮು ಹಾಕಿ ಯಶಸ್ವಿಯಾಗಿ ಸಮ್ಮೇಳನ ಆಯೋಜಿಸಲು ಚಿತ್ತ ಹರಿಸಿದೆ.
ಬ್ಯಾನರ್, ಅಲಂಕಾರ ವೆಚ್ಚಕ್ಕೆ ಲಗಾಮು ಹಾಕಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಬ್ಯಾಗ್ ಕೊಡುವುದಿಲ್ಲ, ಪೆನ್ನು ಮತ್ತು ಟಿಪ್ಪಣಿ ಪುಸ್ತಿಕೆ ಮಾತ್ರ ನೀಡಲು ನಿರ್ಧರಿಸಿದೆ. ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ಗೌರವಧನ ಕಡಿತ ಮಾಡಲಾಗುತ್ತದೆ. ಸನ್ಮಾನಿತರಿಗೆ ಪೇಟ, ಸ್ಮರಣಿಕೆ, ಹಣ್ಣಿನ ಬುಟ್ಟಿ ಇರುವುದಿಲ್ಲ. ಶಾಲು, ಹಾರ, ಪುಸ್ತಕ ಮತ್ತು ಅಭಿನಂದನಾ ಪತ್ರ (ಫೋಟೊ ಫ್ರೇಮ್) ನೀಡಲು ಜಿಲ್ಲಾ ಕಸಾಪ ತೀರ್ಮಾನಿಸಿದೆ.
‘ದಾನಿಗಳಿಂದ ನೆರವು ಹರಿದು ಬರುತ್ತಿದೆ. ಈವರೆಗೆ ₹ 4 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಅದ್ಧೂರಿಗೆ ಬ್ರೇಕ್ ಹಾಕಿ ಗೋಷ್ಠಿಗೆ ಪ್ರಾಧಾನ್ಯ ನೀಡಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಶೋಕ ಕುಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಸತಿ, ಊಟ ಎಲ್ಲದಕ್ಕೂ ವ್ಯವಸ್ಥೆ ಮಾಡಿದ್ದೇವೆ. ಶಾರದಾ ಪೀಠ, ಆದಿಚುಂಚನಗಿರಿ ಮಠದವರು ಈ ನಿಟ್ಟಿನಲ್ಲಿ ಸಾಥ್ ನೀಡಿದ್ದಾರೆ. ಕಳೆದ ವರ್ಷ ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನಕ್ಕೆ ಸುಮಾರು ₹15 ಲಕ್ಷ ವೆಚ್ಚವಾಗಿತ್ತು. ಈ ಬಾರಿ ₹ 8 ಲಕ್ಷ ವೆಚ್ಚದಲ್ಲಿ ಮುಗಿಸಲು ಉದ್ದೇಶಿಸಲಾಗಿದೆ. ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು, ನಿರ್ವಿಘ್ನವಾಗಿ ನಡೆಯಬೇಕು ಎಂಬುದಷ್ಟೆ ನಮ್ಮ ಆಶಯ’ ಎಂದರು.
ಇದೇ 10 ಮತ್ತು 11ರಂದು ಶೃಂಗೇರಿಯಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆ ಮಾಡಿರುವುದಕ್ಕೆ ಪರ–ವಿರೋಧದ ಅಲೆ ಎದ್ದಿದ್ದು, ವಿವಾದ ತಣ್ಣಗಾಗಿಲ್ಲ. ಸರ್ಕಾರ ಕೆಂಗಣ್ಣು ಬೀರಿ, ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ದಾನಿಗಳ ನೆರವು ಮತ್ತು ಸ್ವಂತ ಹಣ ಹಾಕಿ ಸಮ್ಮೇಳನ ನಡೆಸಲು ಸಂಘಟಕರು ಸಜ್ಜಾಗಿದ್ದಾರೆ. ಸ್ವಾಗತ ಸಮಿತಿಯ ಬ್ಯಾಂಕ್ ಖಾತೆಗೆ ನಾಡಿನ ಹಲವಾರು ಸಾಹಿತಿಗಳು, ಲೇಖಕರು, ಸಾಹಿತ್ಯಾಸ್ತಕರು ಧನಸಹಾಯ ಜಮೆ ಮಾಡಿದ್ದಾರೆ.
ಬ್ಯಾನರ್ ತೆರವು
ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕೆಲವೆಡೆ ಅಳವಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬ್ಯಾನರ್‌ಗಳನ್ನು ಪಟ್ಟಣ ಪಂಚಾಯಿತಿ ಬುಧವಾರ ಸಂಜೆ ತೆರವುಗೊಳಿಸಿದೆ.
ಬಸ್ ನಿಲ್ದಾಣ, ಕಟ್ಟೆವಾಗಿಲು, ಕುರುಬಕೇರಿ, ಸಂತೆ ಮಾರುಕಟ್ಟೆಗಳಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಪೊಲೀಸ್ ಸುಪರ್ದಿಯಲ್ಲಿ ತೆರವು ಮಾಡಲಾಗಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವನಾಯಕ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬ್ಯಾನರ್ ಅಳವಡಿಸಲು ಅನುಮತಿ ಪಡೆದಿಲ್ಲ. ಹೀಗಾಗಿ ತೆರವುಗೊಳಿಸಿದ್ದೇವೆ. ಸಾಹಿತ್ಯ ಸಮ್ಮೇಳನದ್ದು ಮಾತ್ರವಲ್ಲ, ಅನುಮತಿ ಇಲ್ಲದ ಎಲ್ಲ ಬ್ಯಾನರ್‌ಗಳನ್ನೂ ತೆರವು ಮಾಡಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
ನಕ್ಸಲರನ್ನು ಕರೆತಂದ ಹೆಗ್ಡೆ: ಸಚಿವ
ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆಹಿಡಿದ ಕ್ರಮವನ್ನು ಸಮರ್ಥಿಸಿಕೊಂಡ ಸಚಿವ ಸಿ.ಟಿ.ರವಿ, ‘ನಕ್ಸಲರನ್ನು ಕರೆತಂದು ಮಲೆನಾಡಿನ ನೆಮ್ಮದಿ ಹಾಳು ಮಾಡಿದ್ದು ಕಲ್ಕುಳಿ ವಿಠಲ ಹೆಗ್ಡೆ. ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ವಿರೋಧವಿದೆ. ಹೀಗಾಗಿ, ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಹಾಗೂ ಸಹಕಾರ ನೀಡುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ತಿಳಿಸಿದರು.
‘ಇದು ವ್ಯಕ್ತಿಗತ ದ್ವೇಷವಲ್ಲ. ಅಭಿಪ್ರಾಯ ಭೇದ ಅಥವಾ ಸೈದ್ಧಾಂತಿಕ ಕಾರಣಕ್ಕೆ ಅನುದಾನ ತಡೆಹಿಡಿದಿಲ್ಲ. ಎಡಪಂಥೀಯರು ಹಾಗೂ ನಕ್ಸಲರು ಒಂದೇ ಅಲ್ಲ. ನಕ್ಸಲರು ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲು, ಬುಲೆಟ್ ಮೇಲೆ ನಂಬಿಕೆ ಇಟ್ಟವರು. ಇವರೆಡೂ ಪಂಥಗಳು ಒಂದೇ ಎನ್ನುವರು ಚರ್ಚೆಗೆ ಬರಬಹುದು’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.