ADVERTISEMENT

ಕಳಸ | ತೂಗುಸೇತುವೆ ನಿರ್ವಹಣೆ ಯಾರ ಹೊಣೆ?

ರವಿ ಕೆಳಂಗಡಿ
Published 14 ಜುಲೈ 2024, 7:26 IST
Last Updated 14 ಜುಲೈ 2024, 7:26 IST

ಕಳಸ ತಾಲ್ಲೂಕು ಎಸ್.ಕೆ.ಮೇಗಲ್ ಗ್ರಾಮದ ಆನಮಗೆ ತೂಗುಸೇತುವೆ ನಿರ್ವಹಣೆ ಇಲ್ಲದೆ ಸೊರಗಿದೆ

ಕಳಸ ತಾಲ್ಲೂಕು ಎಸ್.ಕೆ.ಮೇಗಲ್ ಗ್ರಾಮದ ಆನಮಗೆ ತೂಗುಸೇತುವೆ ನಿರ್ವಹಣೆ ಇಲ್ಲದೆ ಸೊರಗಿದೆ

ಕಳಸ: ತಾಲ್ಲೂಕು ವ್ಯಾಪ್ತಿಯ ಸಂಸೆ ಮತ್ತು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ತೂಗುಸೇತುವೆಗಳು ಇವೆ. ಆದರೆ, ಇವುಗಳ ನಿರ್ವಹಣೆ ಯಾರ ಹೊಣೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ADVERTISEMENT

ಕಳಸ ಸಮೀಪದ ವಶಿಷ್ಟಾಶ್ರಮ, ಕಲ್ಲುಗೋಡು, ಸಂಸೆ ಗ್ರಾಮದ ಆನಮಗೆ, ಸಂಸೆ ಮತ್ತಿತರ ಪ್ರದೇಶದಲ್ಲಿ 15 ವರ್ಷಗಳ ಹಿಂದೆ  ತೂಗುಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇವು ಕಾಲದ ಓಟಕ್ಕೆ ಸಿಲುಕಿ ಶಿಥಿಲಗೊಳ್ಳುತ್ತಿವೆ. ವಿಪರ್ಯಾಸ ಎಂದರೆ ಈ ತೂಗುಸೇತುವೆಗಳ ನಿರ್ವಹಣೆಯ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಈ ತೂಗುಸೇತುವೆಗಳು ಆಯಾ ಪ್ರದೇಶದ ನೂರಾರು ಮನೆಗಳ ಜನರಿಗೆ ಮಳೆಗಾಲದಲ್ಲಿ ಸಂಪರ್ಕ ಸಾಧನಗಳಾಗಿವೆ. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವಧಿಯಲ್ಲಿ ಇವು ನಿರ್ಮಾಣವಾಗಿದ್ದವು.

ಕಾಲ ಕಳೆದಂತೆ ಈ ತೂಗುಸೇತುವೆಗಳ ಕಬ್ಬಿಣದ ಪಟ್ಟಿಗಳು, ಜಾಲರಿಗಳು ತುಕ್ಕು ಹಿಡಿದಿವೆ. ಮೆಟ್ಟಿಲುಗಳ ಕೆಳಗಿನ ಕಬ್ಬಿಣದ ಆಧಾರ ಕೂಡ ಜಖಂ ಆಗಿದೆ. ಹಲವಾರು ವರ್ಷಗಳಿಂದ ತೂಗುಸೇತುವೆಗಳಿಗೆ ಬಣ್ಣ ಬಳಿಯುವಂತೆ ಇಟ್ಟ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಸೇತುವೆಯ ಮೇಲೆ ಜನರು ಓಡಾಡಿದಾಗ ಕೀರಲು ಧ್ವನಿ ಕೇಳಿ ಬರುತ್ತಿದೆ. ಸೇತುವೆಗಳು ಅತ್ತಿತ್ತ ತೂಗುವಾಗ ಗ್ರಾಮಸ್ಥರು ಭಯ ಬೀಳುತ್ತಾರೆ. ಕೆಳಗೆ ತುಂಬಿ ಹರಿಯುವ ಭದ್ರೆ ಭಯವನ್ನು ಇಮ್ಮಡಿಸುತ್ತಾಳೆ ಎನ್ನುತ್ತಾರೆ ಸ್ಥಳೀಯರು.

‘ಮಳೆಗಾಲದಲ್ಲಿ ತೂಗುಸೇತುವೆ ಮೇಲೆ ಹೋಗುವುದನ್ನೇ ಬಿಟ್ಟಿದ್ದೇವೆ. ಯಾವಾಗ ಮುರಿದು ಬೀಳುವುದೋ ಎಂಬ ಭಯ ಇದೆ. ಶಾಲಾ ಮಕ್ಕಳು ಸೇತುವೆ ಮೇಲೆ ಹೋಗುವಾಗ ಹೆದರಿಕೆ ಆಗುತ್ತದೆ ಅನ್ನುತ್ತಾರೆ’ ಎಂದು ಕಲ್ಲುಗೋಡಿನ ಗಿರೀಶ್ ತಮ್ಮ ಗ್ರಾಮದ ತೂಗುಸೇತುವೆ ಬಗ್ಗೆ ಹೇಳಿದರು.

ಈ ತೂಗುಸೇತುವೆಗಳ ನಿರ್ವಹಣೆ ಯಾರ ಹೊಣೆ ಎಂದು ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಅವರನ್ನು ಕೇಳಿದಾಗ, ಈ ಸೇತುವೆಗಳಿಗೆ ವಾರಸುದಾರರು ಎಂಬುದೇ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಸಾಮಾನ್ಯವಾಗಿ ಸೇತುವೆಗಳು, ರಸ್ತೆಗಳು, ಲೋಕೋಪಯೋಗಿ ಅಥವಾ ಜಿಲ್ಲಾ ಪಂಚಾಯಿತಿ ಎಂಜಿನಿಯಿರಿಂಗ್ ವಿಭಾಗದ ನಿರ್ವಹಣೆಗೆ ಒಳಪಟ್ಟಿರುತ್ತವೆ. ಆದರೆ ಈ ತೂಗುಸೇತುವೆಗಳು ಯಾವ ಇಲಾಖೆಗೆ ಒಳಪಟ್ಟಿವೆ ಎಂಬುದೇ ಯಕ್ಷಪ್ರಶ್ನೆ. ಇವು ಆಯಾ ಗ್ರಾಮ ಪಂಚಾಯಿತಿಗಳಿಗೆ ಕೂಡ ಹಸ್ತಾಂತರ ಆಗಿಲ್ಲ ಎಂದು ಅವರು ಹೇಳುತ್ತಾರೆ.

200ರಿಂದ 300 ಅಡಿ ಉದ್ದದ ಈ ತೂಗುಸೇತುವೆಗಳಿಗೆ ಬಣ್ಣ ಬಳಿಯಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಜೊತೆಗೆ ಅತ್ಯಂತ ನಿಪುಣರು ಈ ಕೆಲಸ ಮಾಡಬೇಕಾಗುತ್ತದೆ. ಸೇತುವೆಯ ನಟ್, ಬೋಲ್ಟ್, ಕಬ್ಬಿಣದ ರೋಪ್ ಬಿಚ್ಚಿ ಬಣ್ಣ ಬಳಿಯುವವರು ಯಾರು? ಇಂತಹ ಕೆಲಸವನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸುವುದು ಸುಲಭ ಅಲ್ಲ ಎಂದು ರಂಗನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಹುತೇಕ ಸಣ್ಣ ಕೃಷಿಕರು, ಕೂಲಿ ಕಾರ್ಮಿಕರೇ ಇರುವ ಪ್ರದೇಶಕ್ಕೆ ಈ ತೂಗುಸೇತುವೆಗಳು ಸಂಪರ್ಕ ಒದಗಿಸುತ್ತಿವೆ. ಪ್ರವಾಸಿಗರು ಕೂಡ ತೂಗುಸೇತುವೆಗಳನ್ನು ಬಳಸಿ ರೋಮಾಂಚಕ ಅನುಭವ ಪಡೆಯಲು ವಾರಾಂತ್ಯದಲ್ಲಿ ಇಲ್ಲಿಗೆ ದಾಂಗುಡಿ ಇಡುತ್ತಾರೆ. ಶಿಥಿಲಗೊಂಡಿರುವ ಇವು ಕಳಚಿ ಬಿದ್ದರೆ ಆಗುವ ಅಪಾಯಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.