ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಇರುವುದರಿಂದ ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಪ್ರವಾಸಿ ತಾಣಗಳು ತುಂಬಿ ತುಳುಕಿದವು.
ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ನಾಲ್ಕು ದಿನ ಸರ್ಕಾರಿ ಇರುವುದರಿಂದ ಜನ ಪ್ರವಾಸದಲ್ಲಿ ತೊಡಗಿದ್ದಾರೆ. ಹೊರ ರಾಜ್ಯಗಳು ಮತ್ತು ನಾಡಿನ ವಿವಿಧೆಡೆಗಳಿಂದ ಜನ ದಾಂಗುಡಿ ಇಟ್ಟಿದ್ದಾರೆ.
ಹಾಸನದಲ್ಲಿ ಹಾಸನಾಂಬೆ ದರ್ಶನಕ್ಕೆ ಬಂದವರು ಚಿಕ್ಕಮಗಳೂರು ಕಡೆಗೆ ಬರುತ್ತಿದ್ದಾರೆ. ಬಿಂಡಿಗ ದೇವೀರಮ್ಮ ದೇವಿ ದರ್ಶನ ಪಡೆದವರೂ ಮುಳ್ಳಯ್ಯನಗಿರಿ ಸೇರಿ ಇತರ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ. ಮುಳ್ಳಯ್ಯನಗಿರಿ ತುದಿಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರುಗಳು ಸಾಲುಗಟ್ಟಿ ನಿಂತು, ವಾಪಸ್ ಬರಲು ಸಾಧ್ಯವಾಗದೆ ಪರದಾಡಿದರು. ದಟ್ಟಣೆ ನಿಯಂತ್ರಿಸಲು ಪೊಲೀಸರು, ಸ್ಥಳೀಯರು ಹರಸಾಹಸ ನಡೆಸಿದರು.
ಗಿರಿ ಶ್ರೇಣಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು, ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಕಲರವ ಮೇಳೈಸಿದೆ. ಹೋಂ ಸ್ಟೆ, ಲಾಡ್ಜ್‌ಗಳು, ಅತಿಥಿ ಗೃಹ ಎಲ್ಲವೂ ಭರ್ತಿಯಾಗಿವೆ.
ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ಬಾಬಾಬುಡನ್ ಗಿರಿ, ಹೊನ್ನಮ್ಮನ ಹಳ್ಳ, ಮಾಣಿಕ್ಯಧಾರಾ ಜಲಪಾತ, ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿ, ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಸೇರಿತ್ತು.
ಕೆಎಸ್‌ಆರ್‌ಟಿಸಿ ಬಸ್‌ಗಳ ಬಹುತೇಕ ಭರ್ತಿಯಾಗಿ ಸಂಚರಿಸಿದವು. ದೇಗುಲುಗಳಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಇನ್ನು ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿತ್ತು. ವಾಹನ ನಿಲುಗಡೆಗೆ ಜಾಗವಿಲ್ಲದೆ ಪ್ರವಾಸಿಗರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.