ADVERTISEMENT

ಹೆಬ್ಬೆ ಜಲಪಾತ: ಕಾಲುಜಾರಿ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:26 IST
Last Updated 10 ಜೂನ್ 2024, 14:26 IST
ಶ್ರವಣ್
ಶ್ರವಣ್   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಮಲೆನಾಡಿನಲ್ಲಿ ವರ್ಷಧಾರೆ ಆರ್ಭಟಿಸಿದೆ.

ಬಾಳೆಹೊನ್ನೂರು, ಮೂಡಿಗೆರೆ, ಕಳಸ, ಶೃಂಗೇರಿ, ಎನ್.ಆರ್.ಪುರ ಭಾಗದಲ್ಲಿ ಮಳೆ ಮುಂದುವರಿದಿದೆ. ಭಾನುವಾರದ ಮಳೆಗೆ ಹೋಲಿಸಿದರೆ ಸೋಮವಾರ ಕೊಂಚ ಕಡಿಮೆಯಾಗಿದೆ.

ಕೆರೆಕಟ್ಟೆಯಲ್ಲಿ ಭಾನುವಾರ ರಾತ್ರಿ 8 ಸೆಂಟಿ ಮೀಟರ್ ಮಳೆಯಾಗಿದೆ. ಶೃಂಗೇರಿ, ಕಿಗ್ಗಾ, ಹರಿಹರಪುರ, ಕೊಟ್ಟಿಗೆಹಾರ ಭಾಗದಲ್ಲಿ ಮೂರು ಸೆಂಟಿ ಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಉಳಿದೆಡೆ ಎರಡು ಸೆಂಟಿ ಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಮೂಡಿಗೆರೆಯಲ್ಲಿ ಮನೆಯೊಂದು ಬಿದ್ದಿದ್ದು, ಬಾಳೆಹೊನ್ನೂರು ಸಮೀಪ ಮರ ರಸ್ತೆಗೆ ಉರುಳಿದೆ.

ADVERTISEMENT

ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದೆ.

ಹೆಬ್ಬೆ ಜಲಪಾತ: ಕಾಲುಜಾರಿ ಬಿದ್ದು ಯುವಕ ಸಾವು

ಕೆಮ್ಮಣ್ಣುಗುಂಡಿ ಬಳಿ ಇರುವ ಹೆಬ್ಬೆ ಜಲಪಾತ ವೀಕ್ಷಣೆಗೆ ತೆರಳಿದ್ದ ಹೈದರಾಬಾದ್‌ನ ಶ್ರವಣ್(25) ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಶ್ರವಣ್ ಮತ್ತು ಶ್ರೀಕಾಂತ್ ಚಿಕ್ಕಮಗಳೂರಿಗೆ ಭಾನುವಾರವೇ ಬಂದಿದ್ದರು. ಬಾಡಿಗೆ ಬೈಕ್ ಪಡೆದು ಸುತ್ತಾಡುತ್ತಿದ್ದ ಅವರು ಸೋಮವಾರ ಕೆಮ್ಮಣ್ಣುಗುಂಡಿ ಭಾಗದ ಹೆಬ್ಬೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಜಲಪಾತದಲ್ಲಿ ಆಟವಾಡುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದು ಶ್ರವಣ್ ಮೃತಪಟ್ಟಿದ್ದಾರೆ. ತರೀಕೆರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.