ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರ ಸುರಿದ ಮಳೆ ಬೆಳೆಹಾನಿ ಜತೆಗೆ ಮನೆಗಳಿಗೂ ಹಾನಿ ಮಾಡಿ ಹೋಗಿದೆ. ವಾಡಿಕೆಗಿಂತ ಶೇ 100ರಷ್ಟು ಹೆಚ್ಚು ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಮಳೆ ನಿರಂತರವಾಗಿ ಸುರಿಯುತ್ತಲೇ ಇದ್ದು, ಮಲೆನಾಡು ಭಾಗದಲ್ಲಂತೂ ಮಳೆ ಬಿಡುವನ್ನೇ ನೀಡಿಲ್ಲ. ವರ್ಷಾರಂಭದಿಂದ ಈವರೆಗೆ ವಾಡಿಕೆಯಂತೆ 173.4 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. ಆದರೆ, 215.3 ಸೆಂಟಿ ಮೀಟರ್ ಮಳೆಯಾಗಿದೆ.
ಅಕ್ಟೋಬರ್ ತಿಂಗಳಲ್ಲಿನಲ್ಲೇ 23 ಸೆಂಟಿ ಮೀಟರ್ ಮಳೆಯಾಗಿದೆ. ನಿತ್ಯ ಮಳೆ ಸುರಿದಿದ್ದರಿಂದ ರೈತರು ಬೇಸತ್ತಿದ್ದಾರೆ. ಮಲೆನಾಡಿನಲ್ಲಿ ಅಡಿಕೆ, ಕಾಫಿ, ಕಾಳು ಮೆಣಸು, ಭತ್ತ ಬೆಳೆದ ಬೆಳೆಗೆ ಹಾನಿಯಾಗಿದೆ. ಬಯಲು ಸೀಮೆಯಲ್ಲಿ ಈರುಳ್ಳಿ ಸೇರಿ ತರಕಾರಿ ಬೆಳೆ ನೆಲಕಚ್ಚಿವೆ. ರೈತರು ಮಾತ್ರವಲ್ಲ ಕೂಲಿ ಕಾರ್ಮಿಕರೂ ತೊಂದರೆ ಅನುಭವಿಸಿದರು.
ಕಳೆದೊಂದು ವಾರದಲ್ಲಿ ಕಡೂರು ತಾಲ್ಲೂಕಿನಲ್ಲಿ ಶೇ 225ರಷ್ಟು ಹೆಚ್ಚುವರಿ ಮಳೆಯಾಗಿದ್ದರೆ, ಅಜ್ಜಂಪುರ ತಾಲ್ಲೂಕಿನಲ್ಲಿ ಶೇ 219ರಷ್ಟು ಹೆಚ್ಚುವರಿ ಮಳೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಕ್ಟೋಬರ್ ಮಳೆ ಜಿಲ್ಲೆಯ ರೈತರಿಗೆ ಇಷ್ಟು ಕಾಟ ಕೊಟ್ಟಿರಲಿಲ್ಲ. ಈ ವರ್ಷ ಅತಿವೃಷ್ಟಿಯ ನಡುವೆ ಅಕ್ಟೋಬರ್ ಮಳೆ ಕೂಡ ಜನರನ್ನು ಕಾಡಿತು.
ಬಯಲು ಸೀಮೆಯಲ್ಲಿ ಕೆರೆಕಟ್ಟೆಗಳು ಭರ್ತಿ ಆಗಿರುವುದರಿಂದ ಬೇಸಿಗೆಯಲ್ಲಿ ಅಷ್ಟೇನು ತೊಂದರೆ ಆಗುವುದಿಲ್ಲ. ಆದರೆ, ಮಳೆಯಲ್ಲೇ ಬೆಳೆ ಹಾನಿಗೀಡಾಗಿದೆ. ಕೈಗೆ ಬಂದಿದ್ದ ಬೆಳೆ ಸಂಸ್ಕರಣೆ ಸಾಧ್ಯವಾಗದೆ ಹಾಳಾಯಿತು ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಕಾಫಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಬಂದಿದೆ. ಅತಿಯಾದ ಮಳೆಯಿಂದ ಫಸಲು ಉದುರಿ ಮಣ್ಣುಪಾಲಾಗಿರುವುದು ಬೆಳೆಗಾರರಲ್ಲೂ ಬೇಸರ ಉಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.