ಚಿಕ್ಕಮಗಳೂರು: ಬೇಲೂರು–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥವಾಗಿ ವಿಸ್ತರಿಸುವ ಯೋಜನೆ ಇನ್ನೂ ಸಮಗ್ರ ಯೋಜನಾ ವರದಿ ತಯಾರಿಕೆ ಹಂತದಲ್ಲೇ ಉಳಿದಿದ್ದು, ಸದ್ಯಕ್ಕೆ ರಸ್ತೆ ವಿಸ್ತರಣೆಯಾಗುವ ಲಕ್ಷಣಗಳಿಲ್ಲ.
ಬೆಂಗಳೂರು–ಚಿಕ್ಕಮಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಇದಾಗಿದ್ದು, 2022ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ರಾಷ್ಟ್ರೀಯ ಹೆದ್ದಾರಿ–373 ಎಂದು ಹೆಸರಿಡಲಾಗಿದೆ. ಆದರೆ, ರಸ್ತೆ ವಿಸ್ತರಣೆ ಮಾತ್ರ ಆಗಿಲ್ಲ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಚಿಕ್ಕಮಗಳೂರಿಗೆ ಬೆಂಗಳೂರಿನಿಂದ ಸಮರ್ಪಕ ಮಾರ್ಗವೇ ಇಲ್ಲವಾಗಿದೆ.
ಬೆಂಗಳೂರಿನಿಂದ ಹಾಸನದ ತನಕ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಇದೆ. ಹಾಸನದಿಂದ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ತಲುಪುವುದು ವಾಹನ ಸವಾರರಿಗೆ ಪ್ರಯಾಸದ ಕೆಲಸ. ಎರಡು ಪಥದ ಅಂಕುಡೊಂಕಿನ ಹಾದಿಯಲ್ಲಿ ಸಾಗಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ರಸ್ತೆ ಗುಂಡಿಮಯವಾಗಿದ್ದು, ಇದರ ನಡುವೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
ಹಾಸನ–ಬೇಲೂರು ತನಕ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಿಸುವ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಷವೇ ಕಳೆದಿದೆ. ಆದರೆ, ಕಾಮಗಾರಿ ಮಾತ್ರ ಆರಂಭವಾಗಿಲ್ಲ. ‘₹500 ಕೋಟಿ ಮೊತ್ತದ ಕಾಮಗಾರಿಗೆ ಶೇ 30ರಷ್ಟು ಕಡಿಮೆ ನಮೂದಿಸಿದ್ದ ಗುತ್ತಿಗೆದಾರರಿಗೆ ಟೆಂಡರ್ ಅಂತಿಮಗೊಂಡಿದೆ. ಆದರೆ, ಅಷ್ಟು ಮೊತ್ತದಲ್ಲಿ ಕಾಮಗಾರಿ ನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿ ಆರಂಭವಾಗಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಹೇಳುತ್ತವೆ.
ಬೇಲೂರು–ಚಿಕ್ಕಮಗಳೂರು 24 ಕಿಲೋ ಮೀಟರ್ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾದರೂ ಕಿರಿದಾದ ರಸ್ತೆಯಾಗಿಯೇ ಮುಂದುವರಿ ದಿದೆ. ಗುಂಡಿಗಳ ನಡುವೆ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಈ ರಸ್ತೆ ವಿಸ್ತರಣೆಯ ಯೋಜನೆ ಯಾವ ಹಂತದಲ್ಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅವರು ವಿಧಾನಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಲೋಕೋ ಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಇದೆ. ಕಾರ್ಯಸಾಧ್ಯತಾ ವರದಿ ಮತ್ತು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಹಂತದಲ್ಲಿದೆ’ ಎಂದು ತಿಳಿಸಿದ್ದಾರೆ.
ರಸ್ತೆ ನಿರ್ವಹಣೆಗೆ ₹1.12 ಕೋಟಿ ಅನುದಾನವನ್ನು ಕೇಂದ್ರ ಭೂಸಾರಿಗೆ ಸಚಿವಾಲಯ ನೀಡಿದೆ. ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಸಾಧ್ಯತಾ ವರದಿ ತಯಾರಿಕಾ ಹಂತದಲ್ಲೇ ಇರುವ ಈ ಯೋಜನೆಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರಸ್ತೆ ನಿರ್ಮಾಣವಾಗಲು ಹಲವು ವರ್ಷಗಳೇ ಬೇಕಾಗಲಿವೆ. ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲು ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂಬುದು ಸ್ಥಳೀಯರ ಒತ್ತಾಯ.
ನಗರದಲ್ಲಿ ಕಡೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಿಸುವ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯದ 2024–25ರ ವಾರ್ಷಿಕ ಯೋಜನೆಯಲ್ಲಿ ₹400 ಅನುದಾನ ಮೀಸಲಿರಿಸಲಾಗಿದೆ.
ಬೈಪಾಸ್ ರಸ್ತೆ ನಿರ್ಮಾಣಕ್ಕೆ 2023ರ ಅಕ್ಟೋಬರ್‌ನಲ್ಲಿ ಅನುಮೋದನೆ ದೊರೆತಿದೆ. ಡಿಪಿಆರ್ ತಯಾರಿಕೆ ಕೆಲಸ ಪ್ರಗತಿಯಲ್ಲಿದೆ ಎಂದು ಸತೀಶ ಜಾರಕಿಹೊಳಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.