ಕೊಟ್ಟಿಗೆಹಾರ: ಮಳೆಗಾಲ ಆರಂಭವಾದ ಬೆನ್ನಲ್ಲೇ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರವಾಸಿಗರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಪಿ ತೆಗೆಯುವುದು, ವಾಹನ ದಟ್ಟಣೆ ಉಂಟು ಮಾಡುತ್ತಿರುವುದು ಹೆಚ್ಚುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಭಾನುವಾರ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸೂಚನಾ ಫಲಕವನ್ನು ಅಳವಡಿಸಲಾಯಿತು.
‘ಪ್ರವಾಸಿಗರು ಚಾರ್ಮಾಡಿ ಘಾಟ್‌ನ ಸೌಂದರ್ಯ ವೀಕ್ಷಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಇಕ್ಕಟ್ಟಾದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಜಲಪಾತ, ಪ್ರಪಾತದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯುವುದಕ್ಕೆ ನಿಷೇಧ ಹೇರಬೇಕು, ವಾಹನ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸರ ಸಹಕಾರ ಅಗತ್ಯ’ ಎಂದು ಬಣಕಲ್ ಫ್ರೆಂಡ್ಸ್ ಕ್ಲಬ್‌ನ ಗೌರವ ಅಧ್ಯಕ್ಷ ಬಿ.ಸಿ. ಪ್ರವೀಣ್ ಹೇಳಿದರು.
‘ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಗಸ್ತು ವಾಹನವನ್ನು ನಿತ್ಯ ಅಲೇಕಾನ್ ಬಳಿ ನಿಲ್ಲಿಸುವ ಬದಲು ಸೋಮನಕಾಡು ಪ್ರಪಾತ, ಜಲಪಾತದ ಬಳಿ ನಿಲ್ಲಿಸಿದರೆ ವಾಹನ ದಟ್ಟಣೆ, ಅಪಾಯದ ಸ್ಥಳದಲ್ಲಿ ಸೆಲ್ಫಿ ತೆಗೆಯುವವರನ್ನು ,ಮೋಜು ಮಸ್ತಿಯಲ್ಲಿ ತೊಡಗುವವರನ್ನು ನಿಯಂತ್ರಿಸಬಹುದು' ಎಂದು ಗ್ರಾಮಸ್ಥರಾದ ಬಿ.ಎಂ.ರಶೀದ್ ಹೇಳಿದರು.
‘ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಗಸ್ತು ವಾಹನವನ್ನು ಸೋಮನಕಾಡು ಬಳಿ ನಿಲ್ಲಿಸಿ ವಾಹನ ದಟ್ಟಣೆ ನಿಯಂತ್ರಿಸಲಾಗುವುದು. ಬಣಕಲ್ ಠಾಣೆಯ ವಾಹನ ಕೂಡ ಎರಡು ಬಾರಿ ಘಾಟ್‌ನಲ್ಲಿ ಗಸ್ತು ತಿರುಗಿ, ಪ್ರವಾಸಿಗರ ಮೇಲೆ ನಿಗಾ ವಹಿಸಲಿದೆ’ ಎಂದು ಬಣಕಲ್ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.