ADVERTISEMENT

ತಂದೆಗೆ ಜೀವನಾಂಶ ಕೊಡಲು ಒಪ್ಪದ ಮಕ್ಕಳು: ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ 

ತಿಂಗಳಿಗೆ ₹6 ಸಾವಿರ ಜೀವನಾಂಶ ನೀಡಲು ಆದೇಶ

ವಿಜಯಕುಮಾರ್ ಎಸ್.ಕೆ.
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ನ್ಯಾಯಾಲಯ ( ಸಾಂದರ್ಭಿಕ ಚಿತ್ರ)</p></div>

ನ್ಯಾಯಾಲಯ ( ಸಾಂದರ್ಭಿಕ ಚಿತ್ರ)

   

ಚಿಕ್ಕಮಗಳೂರು: ಹೆತ್ತ ತಂದೆಗೆ ತಿಂಗಳಿಗೆ ₹3 ಸಾವಿರ ಜೀವನಾಂಶ ನೀಡಲು ಉಪವಿಭಾಗಾಧಿಕಾರಿ ನೀಡಿದ್ದ ಆದೇಶ ಪ್ರಶ್ನಿಸಿದ್ದ ಮಕ್ಕಳು ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜೀವನಾಂಶ ನೀಡಬೇಕು ಎಂಬ ಅದೇಶವನ್ನೇ ಜಿಲ್ಲಾಧಿಕಾರಿ ನ್ಯಾಯಾಲಯ ಕೂಡ ಎತ್ತಿ ಹಿಡಿದಿದೆ.

ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಬಸವರಾಜಪ್ಪ ಅವರು ಜೀವನಾಂಶಕ್ಕಾಗಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 

ADVERTISEMENT

ಬಸವರಾಜಪ್ಪ ಅವರ ಪತ್ನಿ 2014ರಲ್ಲೇ ಮೃತಪಟ್ಟಿದ್ದಾರೆ. ಮಗ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದು, ಮಗಳು ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದಿರುವ ಮಕ್ಕಳು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. 

‘ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ವಯಸ್ಸಾಗಿರುವುದರಿಂದ ನನ್ನ ಪಾಲಿಗೆ ಬಂದಿರುವ ಕೃಷಿ ಭೂಮಿಯಲ್ಲಿ ಉಳುಮೆ ಮಾಡಿ ಆದಾಯ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ತಿಂಗಳಿಗೆ ₹15 ಸಾವಿರ ಖರ್ಚಾಗುತ್ತಿದೆ. ಸರ್ಕಾರಿ ನೌಕರಿಯಲ್ಲಿರುವ ಮಕ್ಕಳು ನನ್ನ ಕಷ್ಟ- ಸುಖಗಳನ್ನು ನೋಡುತ್ತಿಲ್ಲ. ತಿಂಗಳಿಗೆ ₹15 ಸಾವಿರ ಖರ್ಚು ಮಾಡಿ ಮಕ್ಕಳನ್ನು ಓದಿಸಿದ್ದೇನೆ. ಇದರಿಂದಾಗಿಯೇ ಅವರು ಈಗ ಸುಖದಲ್ಲಿದ್ದಾರೆ’ ಎಂದು ಬಸವರಾಜಪ್ಪ ಅವರು ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ತಂದೆಗೆ ಜೀವನಾಂಶ ಕೊಡಲು ಇಷ್ಟವಿಲ್ಲದೆ ಮೇಲ್ಮನವಿ ಸಲ್ಲಿಸಿರುವ ಮಕ್ಕಳು, ‘ಪಿತ್ರಾರ್ಜಿತ ಆಸ್ತಿಯಲ್ಲಿ 8 ಎಕರೆಯಷ್ಟು ಜಮೀನನ್ನು 2005ರಲ್ಲೇ ಮಾರಾಟ ಮಾಡಿದ್ದಾರೆ. ಬಂದ ಹಣವನ್ನು ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗೆ ಬಳಸಿದ್ದಾರೆ. ಇದರಿಂದ ಬೇಸತ್ತ ಒಬ್ಬ ಮಗ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾನೆ. ನಮ್ಮ ತಾಯಿ ಕೂಡ ಇದರಿಂದಲೇ ನೊಂದು ಮೃತಪಟ್ಟಿದ್ದಾರೆ. ನಾವು ಕಷ್ಟಪಟ್ಟು ಓದಿ ಅರ್ಹತೆ ಮೇರೆಗೆ ಸರ್ಕಾರಿ ಕೆಲಸ ಪಡೆದುಕೊಂಡಿದ್ದೇವೆ. ತಾಯಿ ಮರಣ ನಂತರ ಮತ್ತೊಬ್ಬರನ್ನು ಮದುವೆಯಾಗಿ ಊರಿನಲ್ಲೇ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಜೀವನಾಂಶ ನೀಡುವುದಿಲ್ಲ’ ಎಂದು ವಾದಿಸಿದ್ದಾರೆ.

‘ಪಾಲಕರ ಪಾಲನೆ, ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ ಪ್ರಕಾರ ಹಿರಿಯ ನಾಗರಿಕರ ಪಾಲನೆ ಮಾಡುವುದು ಮಕ್ಕಳ ಜವಾಬ್ದಾರಿ. ಆಸ್ತಿ ವ್ಯಾಜ್ಯ ಮುಂದಿಟ್ಟುಕೊಂಡು ಪಾಲನೆ ಮತ್ತು ಪೋಷಣೆ ನಿರ್ಲಕ್ಷಿಸುವಂತಿಲ್ಲ. ಆಸ್ತಿ ಇದ್ದರೂ ಅದರಿಂದ ಜೀವನ ನಡೆಸುವಷ್ಟು ಆದಾಯ ಬರುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ತಿಂಗಳಿಗೆ ತಲಾ ₹3 ಸಾವಿರ ಜೀವನಾಂಶ ನೀಡಬೇಕು ಎಂಬ ಉಪವಿಭಾಗಾಧಿಕಾರಿ ಆದೇಶವನ್ನು ಎತ್ತಿ ಹಿಡಿಯುತ್ತಿದ್ದೇನೆ’ ಎಂದು 2023ರ ಜೂನ್‌ 22ರಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್‌ ಆದೇಶಿಸಿದ್ದರು. 

ಆದರೂ, ಜೀವನಾಂಶ ಕೊಡುತ್ತಿಲ್ಲ ಎಂದು ಬಸವರಾಜಪ್ಪ ಜಿಲ್ಲಾಧಿಕಾರಿಗೆ 2024ರ ಮಾರ್ಚ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದೇಶ ಕಟ್ಟುನಿಟ್ಟಿನ ಪಾಲನೆಗೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಇದೇ ಜೂನ್‌ 12ರಂದು ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.